ದಾಂಡೇಲಿ : ಕರ್ನಾಟಕ ಸರಕಾರ, ಲೋಕಪಯೋಗಿ ಇಲಾಖೆಯ ಆಶ್ರಯದಡಿ ದಾಂಡೇಲಿ ನಗರದ ಬೈಲುಪಾರಿನಿಂದ ಐಪಿಎಂ ಗೆ ಹೋಗುವ ರಸ್ತೆಯಲ್ಲಿ ರೂ: 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆಯನ್ನು ಶಾಸಕರಾದ ಆರ್.ವಿ.ದೇಶಪಾಂಡೆಯವರು ಭಾನುವಾರ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆಯವರು ಈ ಭಾಗದ ಜನತೆಯ ಬಹಳ ಮುಖ್ಯ ಬೇಡಿಕೆಯಾಗಿದ್ದ ಐಪಿಎಂ ಸೇತುವೆ ಇದೀಗ ಲೋಕಾರ್ಪಣೆಯಾಗುವ ಮೂಲಕ ಬೇಡಿಕೆ ಈಡೇರಿದೆ. ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಈ ಸೇತುವೆ ನಿರ್ಮಾಣ ಕಾರ್ಯಕ್ಕೆ ಮಂಜೂರಾತಿ ನೀಡಲಾಗಿತ್ತು. ಆದರೆ ಅನುದಾನ ಮಂಜೂರಾಗದ ಹಿನ್ನಲೆಯಲ್ಲಿ ಕಾಮಗಾರಿ ಪ್ರಕ್ರಿಯೆ ಆರಂಭವಾಗಿರಲಿಲ್ಲ ಎಂದ ಅವರು ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕೆಲಸವನ್ನು ನಿರ್ವಹಿಸಲಾಗುತ್ತಿದೆ. ಸೇತುವೆ ಉದ್ಘಾಟನೆಯ ಜೊತೆಯಲ್ಲಿ ಕುಡಿಯುವ ನೀರು ಪೂರೈಕೆಯ ಕಾಮಗಾರಿಗೂ ಇಂದು ಚಾಲನೆಯನ್ನು ನೀಡಲಾಗಿದೆ. ಶಿಕ್ಷಣ ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ ಎಂದರು.
ನಗರಸಭೆಯ ಸದಸ್ಯ ವೆಂಕಟರಮಣಮ್ಮ ಮೈತುಕುರಿ ಅವರು ಮಾತನಾಡಿ ಆರ್.ವಿ.ದೇಶಪಾಂಡೆ ಅವರ ವಿಶೇಷ ಪ್ರಯತ್ನದಿಂದಾಗಿ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರುಗೊಂಡು, ಸೇತುವೆ ನಿರ್ಮಾಣವಾಗಿ ಇಂದು ಲೋಕಾರ್ಪಣೆಯಾಗಿದೆ. ಮನವಿಗೆ ಸ್ಪಂದನೆ ನೀಡಿ ಈ ಭಾಗದ ಜನತೆಯ ಸಮಸ್ಯೆಗೆ ಪರಿಹಾರವನ್ನು ಒದಗಿಸಿಕೊಟ್ಟ ಆರ್.ವಿ.ದೇಶಪಾಂಡೆ ಅವರಿಗೆ ಈ ಪ್ರದೇಶದ ಸರ್ವ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಸ್.ಪಿ.ಕಟ್ಟಿಮನಿಯವರು ಪ್ರಾಸ್ತವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ್, ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್, ತಾಲ್ಲೂಕು ಪಂಚಾಯ್ತು ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಹಾಲಮನ್ನವರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆರ್.ವಿ.ದೇಶಪಾಂಡೆ ಅವರನ್ನು ಊರಿನ ಜನತೆಯ ಪರವಾಗಿ ನಗರಸಭಾ ಸದಸ್ಯೆ ವೆಂಕಟ್ರಮಣಮ್ಮ ಮೈತುಕರಿ ಮತ್ತು ಸಾರ್ವಜನಿಕರು ಸನ್ಮಾನಿಸಿದರು.
ಶಿಕ್ಷಕಿ ಆಶಾ ಕಿಂದಳ್ಕರ್ ಅವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.