ಅಂಕೋಲಾದಲ್ಲಿ ಭಾರತ್ ಬ್ರಾಂಡ್ ರೈಸ್

ಅಂಕೋಲಾ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬಡ ಮತ್ತು ಮಧ್ಯಮ ವರ್ಗದವರ ಬಗ್ಗೆ ವಿಶೇಷ ಕಾಳಜಿ ಇದೆ. ದುರ್ಬಲರ ಸಬಲೀಕರಣಕ್ಕಾಗಿ ಈಗಾಗಲೇ ಹಲವಾರು ಯೋಜನೆಗಳನ್ನು ಘೋಷಿಸಿ ಕಾರ್ಯಗತಗೊಳಿಸಿದ್ದಾರೆ ಎಂದು ಬಿಜೆಪಿ ಪ್ರಮುಖ ಮುಖಂಡ ಭಾಸ್ಕರ ನಾರ್ವೇಕರ ಹೇಳಿದರು.
ಪಟ್ಟಣದ ಜೈಹಿಂದ್ ಮೈದಾನದಲ್ಲಿ ಭಾರತದ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭಾರತ್ ಬ್ರಾಂಡ್ ಅಕ್ಕಿಯ ವಿತರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ ಮಾತನಾಡಿ, ಭಾರತ್ ಬ್ರಾಂಡ್ ಅಕ್ಕಿ ಯೋಜನೆಯಡಿ ಪ್ರಧಾನಮಂತ್ರಿಯವರು ದೇಶದ ಅಶಕ್ತ ವರ್ಗದವರಿಗೆ ಶಶಕ್ತರಾಗುವ ಅವಕಾಶ ಕಲ್ಪಿಸಿದ್ದಾರೆ. ಹಣದುಬ್ಬರದ ನಡುವೆಯೂ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳು ದೊರಕುವಂತಾಗಿದೆ. ಕೇಂದ್ರ ಸರ್ಕಾರದಿಂದ ಈ ರೀತಿಯಾಗಿ ತ್ವರಿತ ಮತ್ತು ನೇರವಾಗಿ ಆಹಾರ ಸಾಮಗ್ರಿಗಳು ಜನರಿಗೆ ಕೈಗೆಟುಕುವ ದರದಲ್ಲಿ ದೊರಕುತ್ತಿರುವುದು ಪ್ರಧಾನಮಂತ್ರಿಯವರಿಗೆ ಜನರ ಬಗ್ಗೆ ಇರುವ ಕಾಳಜಿಯನ್ನು ಎತ್ತಿ ಹಿಡಿಯುತ್ತದೆ ಎಂದರು.
ಬಿಜೆಪಿಯ ಪ್ರಮುಖರಾದ ರಾಜೇಂದ್ರ ನಾಯ್ಕ, ಅರುಣ ನಾಯ್ಕ, ಜಗದೀಶ ನಾಯಕ, ರಾಘವೇಂದ್ರ ಭಟ್, ನಾಗೇಶ ಕಿಣಿ, ಜಯಾ ನಾಯ್ಕ, ನಾಗರಾಜ ನಾಯ್ಕ ಪಳ್ಳಿಕೇರಿ, ನಾಗರಾಜ ಐಗಳ, ಬಿಂದೇಶ ನಾಯಕ ಮತ್ತಿತರು ಇದ್ದರು. ಅಕ್ಕಿ ಪಡೆಯಲು ಮುಂಜಾನೆಯಿಂದ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹ್ನದವರೆಗೂ ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಅಕ್ಕಿ ವಿತರಣೆ ಮಾಡಲಾಯಿತು. ಪ್ರತಿಯೊಬ್ಬರಿಗೂ ತಲಾ ಹತ್ತು ಕೆಜಿ ಅಕ್ಕಿಯ ಬ್ಯಾಗ್ ನೀಡಲಾಯಿತು.