ಕಾರವಾರ: ಸ್ಥಳೀಯ ಜನರ ಸಹಭಾಗಿತ್ವದಲ್ಲಿ ಸಮುದ್ರ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿ.ಪಂ. ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಮುದ್ರ ತ್ಯಾಜ್ಯ ನಿರ್ವಹಣೆ ಕುರಿತ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆಯು ಅತಿ ಉದ್ದದ ಕರಾವಳಿ ತೀರ ಪ್ರದೇಶವನ್ನು ಹೊಂದಿದ್ದು, ಇದರಿಂದ 5 ತಾಲೂಕುಗಳ ಉದ್ಯೋಗ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಸಮುದ್ರದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಹೀಗಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ ತ್ಯಾಜ್ಯ ಸಂಗ್ರಹ, ವಿಂಗಡಣೆ ಮತ್ತು ನಿರ್ವಹಣೆ ಕುರಿತು ಸಾಕಷ್ಟು ತರಬೇತಿ ಕಾರ್ಯಗಾರಗಳನ್ನು ನಡೆಸಲಾಗುತ್ತಿದೆ.
ಆದರೆ ತರಬೇತಿಯಲ್ಲಿ ಪಡೆದ ಜ್ಞಾನ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದ್ದು, ಜನರಿಗೆ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗುತ್ತಿಲ್ಲ. ಸಮುದ್ರ ತ್ಯಾಜ್ಯ ನಿರ್ವಹಣೆ ಬಗ್ಗೆ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸಮಗ್ರವಾಗಿ ತಿಳಿದುಕೊಳ್ಳದೇ ಇರುವುದರಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಹೀಗಾಗಿ ಎಲ್ಲ ಅಧಿಕಾರಿಗಳು ನುರಿತ ತಜ್ಞರಿಂದ ಪಡೆದುಕೊಂಡ ಜ್ಞಾನವನ್ನು ಬಳಸಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕಿದೆ. ಈ ಕಾರ್ಯ ಯಶಸ್ವಿಯಾಗಲು ಪ್ರತಿಯೊಂದು ಇಲಾಖೆಯ ಸಹಾಯ, ಸಹಕಾರ ಅಗತ್ಯವಾಗಿದೆ ಎಂದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಹೊನ್ನಾವರದ ಟೊಂಕಾ ಕಾಸರಕೋಡನ ಎಫ್ಎಫ್ಪಿಒ ನಿರ್ದೇಶಕ ಪ್ರಕಾಶ್ ನಾಗಪ್ಪ ಮೇಸ್ತ ಮಾತನಾಡಿ, ಸಮುದ್ರ ಸ್ವಚ್ಛತೆ ಪರಿಕಲ್ಪನೆ ಮತ್ತು ಮಹತ್ವ ವಿಷಯದ ಕುರಿತು ಮಾಹಿತಿ ನೀಡಿದರು. ಉಡುಪಿ ಜಿ.ಪಂ. ಸಿಪಿಒ ಶ್ರೀನಿವಾಸ್ ರಾವ್ ಅವರು ಸಮುದ್ರ ತ್ಯಾಜ್ಯ ನಿರ್ವಹಣಾ ಕಾರ್ಯತಂತ್ರಗಳು ವಿಷಯ ಕುರಿತು ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ವಿ.ಎನ್ ನಾಯಕ ಅವರು ಸಮುದ್ರ ತ್ಯಾಜ್ಯ ನಿರ್ವಹಣೆಗೆ ಪೂರಕವಾದ ಕಾನೂನು ಮತ್ತು ನಿಯಮಗಳ ಬಗ್ಗೆ ಸವಿಸ್ತಾರವಾಗಿ ವಿಷಯ ಮಂಡಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಶಿಕ್ಷಣಾರ್ಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಸ್ಐಆರ್‌ಡಿಯ ಬೋಧಕ ಪ್ರಕಾಶ್ ಎಸ್.ಎಚ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗೀಸ್, ಜಿ.ಪಂ. ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಎನ್.ಜಿ.ನಾಯಕ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್, ಪ್ರಭಾರ ಮುಖ್ಯ ಲೆಕ್ಕಾಧಿಕಾರಿ ಡಾ. ಆನಂದ.ಸಾ.ಹಬೀಬ ಸೇರಿದಂತೆ ವಿವಿಧ ಇಲಾಖೆಗಳ ಹಾಗೂ ಜಿ.ಪಂ. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.