ಭಾಶಿ ಗ್ರಾಮದಲ್ಲಿ ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ; ಲಕ್ಷಾಂತರ ರೂ. ಹಾನಿ

ಬನವಾಸಿ: ಅಡಿಕೆ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ನೂರಾರು ಅಡಿಕೆ ಗಿಡಗಳು ಸುಟ್ಟು ಭಸ್ಮವಾದ ಘಟನೆ ಸಮೀಪದ ಭಾಶಿ ಗ್ರಾಮದಲ್ಲಿ ಗುರುವಾರ ರಾತ್ರಿ ಜರುಗಿದೆ.

ಶಿರಸಿ ತಾಲೂಕಿನ ಭಾಶಿ ಗ್ರಾಮದ ತಿಮ್ಮಮ್ಮ ನಾಯ್ಕ್ ಎಂಬುವರಿಗೆ ಸೇರಿದ ಮೂರು ಎಕರೆ ಅಡಿಕೆ ತೋಟದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಗಿಡಗಳು, ತೋಟದಲ್ಲಿ ಅಳವಡಿಸಿದ್ದ ನೀರಾವರಿ ಪರಿಕರಗಳು ಸುಟ್ಟು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸಂಜೆಯ ವೇಳೆ ತೋಟಕ್ಕೆ ನೀರು ಹಾಯಿಸಲು ಬಂದಾಗ ತೋಟಕ್ಕೆ ಬೆಂಕಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಫಲ ನೀಡುತ್ತಿದ್ದ ನೂರಾರು ಅಡಿಕೆ ಗಿಡದ ಜತೆಯಲ್ಲಿ 5-6 ವರ್ಷದ ಅಡಿಕೆ ಗಿಡಗಳು, ನೀರಿನ ಪೈಪ್, ಡ್ರಿಪ್ ಪೈಪ್‌ಗಳು ಸಂಪೂರ್ಣವಾಗಿ ನಾಶವಾಗಿದೆ ಎಂದು ತಿಳಿದುಬಂದಿದ್ದು, ಅಡಿಕೆ ತೋಟದಲ್ಲಿ ವಿದ್ಯುತ್ ಲೈನ್ ಹಾದು ಹೋಗಿದ್ದು, ಬೆಂಕಿ ಹೊತ್ತಿಕೊಂಡಿರುವುದಕ್ಕೆ ಕಾರಣ ಏನು ಎಂದು ತಿಳಿದುಬಂದಿಲ್ಲ.

ಈ ತೋಟದ ಪಕ್ಕದಲ್ಲಿರುವ ರುದ್ರ ಶಿವಪ್ಪ ನಾಯ್ಕ್, ಜಯನಂದ ನಾಯ್ಕ್, ಜನಾರ್ಧನ ನಾಯ್ಕ್ ಎಂಬುವವರ ಅಡಿಕೆ ತೋಟವು ಬೆಂಕಿಗೆ ಆಹುತಿಯಾಗಿ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಭಾಶಿ ಗ್ರಾಪಂ ಸದಸ್ಯ ಗಜಾನನ ಗೌಡ ಹಾಗೂ ಹೆಸ್ಕಾಂ ಕಛೇರಿ, ಕಂದಾಯ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.