ಕುಮಟಾದ ಕಲ್ಲಬ್ಬೆಯಲ್ಲಿ ವಸತಿ ಯೋಜನೆಗೆ ಚಾಲನೆ. ಫಲಾನುಭವಿಗಳಿಗೆ ಕಾಮಗಾರಿ ಆದೇಶ ವಿತರಣಾ ಪತ್ರ ವಿತರಿಸಿದ ಶಾಸಕ ದಿನಕರ ಶೆಟ್ಟಿ

ಕುಮಟಾ : ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ಇಂದು ಕುಮಟಾ ತಾಲೂಕಿನ ಕಲ್ಲಬ್ಬೆ ಗ್ರಾಮಪಂಚಾಯತ್ ವ್ಯಾಪ್ತಿಯ ವಸತಿ ಯೋಜನೆಯ ಫಲಾನುಭವಿಗಳಿಗೆ ಕಾಮಗಾರಿ ಆದೇಶ ವಿತರಣಾ ಪತ್ರವನ್ನು ಹಸ್ತಾಂತರ ಮಾಡಿದರು. ಕಲ್ಲಬ್ಬೆಯ ನಂದಿಕೇಶ್ವರ ಸಭಾಭವನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಆದೇಶ ಪತ್ರ ವಿತರಿಸಿದ ನಂತರ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮಕ್ಷೇತ್ರಕ್ಕೆ ಒಟ್ಟು 2,000 ಮನೆಗಳು ವಸತಿ ಯೋಜನೆಯಡಿಯಲ್ಲಿ ಮಂಜೂರು ಆಗಿತ್ತು. ಈ ಮನೆಗಳನ್ನು ಹಂಚಿಕೆ ಮಾಡುವ ವಿಚಾರದಲ್ಲಿ ಯಾವುದೇ ಪಕ್ಷಪಾತ ಮಾಡದೆ ಅರ್ಹ ಫಲಾನುಭವಿಗಳಿಗೆ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರ ಸಲಹೆಯಂತೆ ಹಂಚಿಕೆ ಮಾಡಲಾಗಿದೆ. ವಾಸಿಸಲು ಒಂದು ಸುಸಜ್ಜಿತ ಮನೆಯನ್ನು ನಿರ್ಮಾಣ ಮಾಡಿಕೊಳ್ಳುವ ಕನಸು ಪ್ರತಿಯೊಬ್ಬರಲ್ಲಿ ಇರುತ್ತದೆ. ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರವು ಮನೆನಿರ್ಮಿಸಲು ಸಹಾಯಧನವನ್ನು ನೀಡುತ್ತಿದೆ. ಆದರೆ ಪ್ರಸ್ತುತವಾಗಿ ಸರ್ಕಾರದಿಂದ ಸಿಗುವ ಸಹಾಯಧನವು ಮನೆನಿರ್ಮಾಣದ ಸಾಮಗ್ರಿಗಳಿಗೆ ತಗುಲುವ ಇಂದಿನ ಖರ್ಚುವೆಚ್ಚಗಳಿಗೆ ತುಲನೆ ಮಾಡಿದರೆ ಬಹಳ ಕಡಿಮೆ ಆಗುತ್ತದೆ. ಈ ಸಹಾಯಧನದ ಮೊತ್ತವನ್ನು ಹೆಚ್ಚಿಸುವ ಕುರಿತು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಮಾನ್ಯ ವಸತಿ ಸಚಿವರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇನೆ. ಎಲ್ಲ ಫಲಾನುಭವಿಗಳು ಮನೆನಿರ್ಮಿಸುವ ಪೂರ್ವದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು, ಸರ್ಕಾರದ ಆದೇಶದಂತೆ ಹಂತಹಂತವಾಗಿ ಕಾಮಗಾರಿ ಪೂರ್ಣಗೊಳಿಸಿಕೊಂಡು ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.

ಕಲ್ಲಬ್ಬೆ ಗ್ರಾ. ಪಂ. ಅಧ್ಯಕ್ಷೆ ಕಮಲಾ ಮುಕ್ರಿ, ಉಪಾಧ್ಯಕ್ಷ ರವಿ ಹೆಗಡೆ, ಸದಸ್ಯರುಗಳಾದ ಸುಬ್ರಹ್ಮಣ್ಯ ಭಟ್ ಹಾಗೂ ಗೋಪಿ ಮುಕ್ರಿ, ತಾ. ಪಂ. ಇ. ಓ.ನಾಗರತ್ನಾ ನಾಯಕ, ಪಿ. ಡಿ. ಓ. ರಶ್ಮಿ ಕುಮಾರಿ ಉಪಸ್ಥಿತರಿದ್ದರು.