ಅಂಕೋಲಾ : ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಶಕ್ತಿ ಕೇಂದ್ರವಾದ ಶ್ರೀಕ್ಷೇತ್ರ ಕೊಗ್ರೆ ಅಷ್ಟಬಂಧ ಮಹೋತ್ಸವ ಇಂದಿನಿಂದ ಶುಭಾರಂಭಗೊಂಡಿದೆ. ಫೆಬ್ರುವರಿ 12ರಂದು ಸೋಮವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರಾರ್ಥನೆ, ನಾಂದಿ, ಇಂದ್ರ ಪ್ರತಿಷ್ಠೆ, ನಿತ್ಯವಿಧಿ ಸಹಿತ ಪುಣ್ಯಾಹವಾಚನ, ಕಂಕಣ ಬಂಧನ, ತೋರಣ ಮುಹೂರ್ತ, ಧ್ವಜಾರೋಹಣ, ಬಲಿ ಪೀಠ ಸ್ಥಾಪನೆ, ಅಖಂಡ ದೀಪ ಸ್ಥಾಪನೆ, ತುಳಸಿ ಪ್ರತಿಷ್ಠೆ, ಗೋಪೂಜೆ ಮತ್ತಿತರ ಧಾರ್ಮಿಕ ವಿಧಿವಿಧಾನಗಳು, ಪೂಜಾ ಕಾರ್ಯಕ್ರಮಗಳು ಸಾಂಘವಾಗಿ ನೆರವೇರಿದವು..
ನೂತನ ಪ್ರವೇಶದ್ವಾರ, ಶಿಲಾಮಯ ಹೆಬ್ಬಾಗಿಲು, ಶಿಲಾಮಯ ಸ್ವಾಗತ ಗೋಪುರಗಳನ್ನು ಲೋಕಾರ್ಪಣೆ ಗೊಳಿಸಲಾಯಿತು. ವಿಶೇಷ ನೆರವು ನೀಡಿದ ಕುಟುಂಬಸ್ಥರು, ವಿಶೇಷ ಸೇವೆ ಹಾಗೂ ಕಾಣಿಕೆ ನೀಡಿದ ಮಹನೀಯರು, ಸ್ಥಳೀಯ ಪ್ರಮುಖರು, ಭಕ್ತಾದಿಗಳು ಪಾಲ್ಗೊಂಡಿದ್ದರು. ಧರಣೇಂದ್ರ ಜೈನ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ಸಾಂಘವಾಗಿ ನೆರವೇರುತ್ತಿದೆ. ಶ್ರೀಕ್ಷೇತ್ರವೂ ಭಕ್ತರ ಕಣ್ಮನ ಸೆಳೆಯುತ್ತಿದೆ. ವಿವಿಧೆಡೆಯಿಂದ ಜನರು ತಂಡೋಪ ತಂಡವಾಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಸಂಜೆ 4:30 ಗಂಟೆಯಿಂದ ವಾಸ್ತು ಮಂಡಲ ಆರಾಧನೆ, ನವಪದ ವಾಸ್ತು (ಕಳಸದ ಮನೆ) ವಾಸ್ತು ರಾಶೋಘ್ನ ಹವನ, ದಿಕ್ಪಾಲಕರ ಆಹ್ವಾನ, ಹವನ ಬಲಿ ಮತ್ತಿತರ ಧಾರ್ಮಿಕ ವಿಧಿವಿಧಾನ ನಡೆಯುತ್ತಿದೆ..
ನಾಳೆ ಫೆ.13ರಂದು ಬೆಳಿಗ್ಗೆ ನಿತ್ಯ ವಾಸ್ತು ವಿಧಾನ, ಸರ್ವದೋಷ ನಿವಾರಣಾ ಆರಾಧನೆ, ವಜ್ರ ಪಂಜರ ಆರಾಧನೆ, ಋುಷಿ ಮಂಡಲ ಆರಾಧನೆ ನಡೆಯಿಲಿದೆ. ಸಂಜೆ 4 ಗಂಟೆ ನಂತರ ಬಾಸಗೋಡದ ಗಾಂಧಿ ಮಂದಿರದ ಎದುರಿನಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಕೊಗ್ರೆ ದೇವಸ್ಥಾನದ ಆವರಣದವರೆಗೆ ಬ್ರಹ್ಮಕಳಸ ಮೆರವಣಿಗೆ ನಡೆಯಲಿದ್ದು, ಚಂಡೆಮೇಳ, ಪಂಚವಾದ್ಯ, ಗುಮಟೆ ಪಾಂಗ್ ಮತ್ತಿತರ ವಾದ್ಯಮೇಳ, ಶ್ರೀ ವೆಂಕಟರಮಣ ಸ್ಥಬ್ದಚಿತ್ರ, ವೀರಹನುಮ, ಯಕ್ಷ ಪಾತ್ರಧಾರಿಗಳು, ಮತ್ತಿತರ ವೇಷಭೂಷಣಗಳು, ರೂಪಕ ಪ್ರದರ್ಶನವಿದೆ. ಮಹಿಳೆಯರಿಂದ ಪೂರ್ಣಕುಂಭ ಮೇರವಣಿಗೆ ನಡೆಯಲಿದ್ದು ಸುತ್ತಮುತ್ತಲ ಎಲ್ಲಾ ಗ್ರಾಮಸ್ಥರು ಹಾಗೂ ಶ್ರೀ ಕೊಗ್ರೆ ಬೊಮಯ್ಯದೇವ ಮತ್ತು ಪರಿವಾರ ದೇವರ ಭಕ್ತರೆಲ್ಲರಿಗೂ ಪಾಲ್ಗೊಳ್ಳುವ ಸದಾವಕಾಶವಿದೆ.
ಫೆ 12ರಿಂದ 16ರವರೆಗೆ ನಡೆಯಲಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮತ್ತಷ್ಟು ಸಹಕಾರ ನೀಡಬೇಕಾಗಿ, ಶ್ರೀ ಕೊಗ್ರೆ ಬೊಮ್ಮಯ್ಯ ದೇವರ ದೇಗುಲ ನವೀಕರಣ ಸಮಿತಿಯವರು ವಿನಂತಿಸಿದ್ದಾರೆ…