ವಿವಾದಾತ್ಮಕ ಪೋಸ್ಟ್ ಹಂಚಿಕೆ : ಭುಗಿಲೆದ್ದ ಹಿಂದೂ ಕಾರ್ಯಕರ್ತರ ಆಕ್ರೋಶ

ಅಂಕೋಲಾ : ಪಟ್ಟಣದ ಹುಲಿದೇವರವಾಡದ ಯುವಕನೋರ್ವ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಇನ್ಸ್ಟಾಗ್ರಾಮ್ ತಾಣದಲ್ಲಿ ಎರಡು ದಿನಗಳ ಹಿಂದೆ ಜಿಲ್ಲಾ ಕೇಂದ್ರದಲ್ಲಿ ಒಬ್ಬರು ಇದೇ ರೀತಿಯ ಪೋಸ್ಟ್ ಹಂಚಿಕೊಂಡ ಹಿನ್ನಲೆ ವಿವಾದ ಉಂಟಾಗಿ ದೂರು ದಾಖಲಾಗುವ ಮೂಲಕ ತಣ್ಣಗಾಗಿತ್ತು. ಇದೇ ಮಾದರಿಯ ಪೋಸ್ಟ್ ಅನ್ನು ಯುವಕ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ. ಇದನ್ನು ಗಮನಿಸಿದ ಹಿಂದೂ ಕಾರ್ಯಕರ್ತರು ಆಕ್ರೋಶಗೊಂಡು, ಅನ್ಯ ಕೋಮಿನ ಯುವಕನ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪಟ್ಟಣದ ಪೊಲೀಸ್‌ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಕೆಲಕಾಲ ಪೊಲೀಸರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಯುವಕನ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಹಿಂದೂ ಕಾರ್ಯಕರ್ತರು ಆಗ್ರಹಿಸಿದರು. ಕಳೆದ ಹಲವು ವರ್ಷಗಳಿಂದ ಈ ರೀತಿ ಪ್ರಕರಣಗಳು ಜರುಗುತ್ತಲೇ ಇವೆ. ಆದರೆ ಸರಿಯಾದ ಕ್ರಮ ತೆಗೆದುಕೊಳ್ಳದ ಕಾರಣ ಅಹಿತಕರ ಘಟನೆಗಳು ಪುನರಾವರ್ತನೆಯಾಗುತ್ತಿವೆ. ಈ ಬಾರಿ ಮತ್ತೆ ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು. ಉದ್ರಿಕ್ತ ಹಿಂದೂ ಕಾರ್ಯಕರ್ತರೊಂದಿಗೆ ಮಾತನಾಡಿದ ಠಾಣೆಯ ಪಿಎಸ್‌ಐ ಸಾರ್ವಜನಿಕವಾಗಿ ಕ್ಷಮೆ ಕೇಳಿಸಲು ನಿರಾಕರಿಸಿ ಇದು ನಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಇಲ್ಲ. ಕಾನೂನಿನಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಪೋಲಿಸ್ ಠಾಣೆಗೆ ಬಂದ ಮುಸ್ಲಿಂ ಸಂಘಟನೆಯ ಮುಖಂಡರು ಈ ಘಟನೆಗೂ ನಮಗೂ ಸಂಬಂಧವಿಲ್ಲ. ಇಲ್ಲಿನ ಮೂಲ ನಿವಾಸಿಗಳು ಹಿಂದೂಗಳೊಂದಿಗೆ ಶಾಂತಿಯುತವಾಗಿ ಹೊಂದಾಣಿಕೆಯಿಂದ ಹಿಂದೂಗಳ ಎಲ್ಲ ಧಾರ್ಮಿಕ ಕಾರ್ಯಗಳಲ್ಲೂ ಭಾಗಿಯಾಗುತ್ತಾರೆ. ಪರ ಸ್ಥಳದಿಂದ ಬಂದ ಕೆಲವರು ಈ ರೀತಿ ಶಾಂತಿ ಕದಡುವ ಇಲ್ಲವೇ ಕಾನೂನಿನ ವಿರುದ್ಧ ರೀತಿಯ ಅವಹೇಳನಕಾರಿ ಬರಹಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅವರ ಮೇಲೆ ಸೂಕ್ತ ಕಾನೂನಿನ ಕ್ರಮವಾಗಬೇಕು ಎನ್ನುವುದು ನಮ್ಮ ಹಾಗೂ ಮುಸ್ಲಿಂ ಸಮುದಾಯದ ಆಗ್ರಹವಾಗಿದೆ ಎಂದು ಹೇಳಿದ್ರು.

ಸಾರ್ವಜನಿಕವಾಗಿ ಕ್ಷಮೆ ಕೇಳಲೇಬೇಕು ಎಂದು ಸಂಘಟನೆಗಳು ಆಗ್ರಹ ಬಲಪಡಿಸುತ್ತಿದ್ದಂತೆ ಎರಡು ಧರ್ಮದ ಮುಖಂಡರ ಸಮ್ಮುಖದಲ್ಲಿ ಚರ್ಚೆ ನಡೆಸಲು ತೀರ್ಮಾನಿಸಲಾಯಿತು. ಚರ್ಚೆಯಲ್ಲಿ ಮಾತನಾಡಿದ ಸಿಪಿಐ ಸಂತೋಷ್ ಶೆಟ್ಟಿ, ಸಾರ್ವಜನಿಕರು ದೂರು ನೀಡದೆ ಇದ್ದಲ್ಲಿ ಸ್ವಯಂ ಪ್ರೇರಿತವಾಗಿ ಪೋಲಿಸರು ಸುಮೋಟೋ ದೂರು ದಾಖಲಸಿ ಗರಿಷ್ಠ ಮಟ್ಟದ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ನಂತರ ಪಟ್ಟಣದಲ್ಲಿ ಕೇಸರಿ ಬಾವುಟವನ್ನು ಹಿಡಿದು ಸಾವಿರಾರು ಎಂದು ಕಾರ್ಯಕರ್ತರು ಮೆರವಣಿಗೆ ನಡೆಸಿದರು.
ಜನರ ಆಕ್ರೋಶದ ಹಿನ್ನಲೆ ವಿವಿಧ ತಾಲ್ಲೂಕುಗಳ ಪಿಎಸ್‌ಐಗಳು ಮತ್ತು ಸಿಪಿಐಗಳು ಸ್ಥಳಕ್ಕೆ ಧಾವಿಸಿದ್ರು…