ಕಾರವಾರ, ಫೆಬ್ರವರಿ 09: ಪಾರ್ಶ್ವವಾಯು ಪೀಡಿತರಿಗೆ ಚಿಕಿತ್ಸೆ ನೀಡುತ್ತೇವೆಂದು ನಕಲಿ ವೈದ್ಯರ ಗ್ಯಾಂಗ್ವೊಂದು ರೋಗಿಗಳಿಂದ ಸಾವಿರಾರು ರೂಪಾಯಿ ಹಣ ಪಡೆದು ವಂಚಿಸಿದೆ. ಆರೋಪಿಗಳು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹೊನ್ನಾವರ ತಾಲೂಕಿನಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದಾರೆ. “ಪಾರ್ಶ್ವವಾಯು ಪೀಡಿತರಿಗೆ ಚಿಕಿತ್ಸೆ ನೀಡಲು ಉತ್ತರ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಆಸ್ಪತ್ರೆ ತೆಗೆಯುತ್ತಿದ್ದೆವೆ. ಅದಕ್ಕೂ ಮುನ್ನ ಮನೆ ಮನೆಗೆ ಚಿಕಿತ್ಸೆ ನೀಡಿ ಪ್ರಚಾರ ಮಾಡಲು ನಾವು ಬಂದಿದ್ದೆವೆ.
ಪಾರ್ಶ್ವವಾಯುಗೆ ಪೀಡಿತರನ್ನು ಕೇವಲ 40 ದಿನದಲ್ಲಿ ಸರಿ ಮಾಡುತ್ತೇವೆ. ನಾವು ನೀಡುವ ಚಿಕಿತ್ಸೆಯಿಂದ ಬಹಳಷ್ಟು ಜನರು ವಾಸಿಯಾಗಿದ್ದಾರೆ” ಎಂದು ಹೇಳಿಕೊಂಡು ಆರೋಪಿಗಳು ಮನೆ ಮನೆ ಭೇಟಿ ನೀಡಿದ್ದಾರೆ. ಇವರಿಂದ ಚಿಕಿತ್ಸೆ ಪಡೆಯುವವರಿಗೆ “ನಾವೆ ನಿಮಗೆ ಖುದ್ದು ಮಸಾಜ್ ಮಾಡುತ್ತೇವೆ, ನಾವು ಔಷಧಿ ಕೊಡುತ್ತೇವೆ. ಅದನ್ನು ತೆಗೆದುಕೊಂಡು ನಾವು ಹೇಳಿದ ಹಾಗೆ ಆಸನಗಳನ್ನ ಮಾಡಿದರೆ, ಕೆವಲ 40 ದಿನದಲ್ಲಿ ಪಾರ್ಶ್ವ ವಾಯು ಪಿಡಿತರನ್ನ ಸರಿ ಮಾಡುತ್ತೇವೆ. ವೈದ್ಯರು ನೀಡಿದ ಔಷಧಿ ಪಡೆಯಬೇಡಿ” ಎಂದು ಜನರನ್ನ ನಂಬಿಸಿ ಸಾವಿರಾರು ರೂಪಾಯಿ ಪಡೆದು ಆರೋಪಿಗಳು ಪರಾರಿ ಆಗಿದ್ದಾರೆ. ರೋಗಿಗಳು ವೈದ್ಯರು ನೀಡಿದ ಔಷಧಿ ತೆಗೆದುಕೊಳ್ಳದೆ ಆರೋಗ್ಯ ಇನ್ನಷ್ಟು ಹಾಳಾಗುತ್ತಿದೆ. ಆರೋಪಿಗಳು ಚಿಕ್ಸಿತ್ಸೆ ನೀಡಿದೆ ಹಣ ಪಡೆದು ಪರಾರಿಯಾಗಿದ್ದಾರೆ.
ಭಟ್ಕಳ ನಗರದ ಖಾಸಗಿ ಶಾಲಾ ಶಿಕ್ಷಕ ಪದ್ಮಯ್ಯ ಎಂಬುವವರ ತಾಯಿಗೆ ಪಾರ್ಶ್ವ ವಾಯು ಆಗಿತ್ತು. ಇವರಿಗೆ ತಮ್ಮ ಮೋಡಿಯ ಮಾತುಗಳಿಂದ ನಂಬಿಸಿ ಕೇವಲ ಎರಡೆ ದಿನದಲ್ಲಿ 26 ಸಾವಿರ ಪಡೆದು ಪರಾರಿಯಾಗಿದ್ದಾರೆ. ವಂಚಕರ ಚಲನ-ವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಂಚನೆಗೊಳಗಾದ ಶಿಕ್ಷಕ ಪದ್ಮಯ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಮಗೆ ಆದ ವಂಚನೆ ಬೇರೆ ಯಾರಿಗೂ ಆಗಬಾರದು. ಹಣದ ಜೊತೆಗೆ ರೋಗಿಗಳ ಆರೋಗ್ಯವು ಹಾಳು ಮಾಡುತ್ತಾರೆ. ವಂಚಕರನ್ನು ಆದಷ್ಟು ಬೇಗ ಬಂಧಿಸುವಂತೆ ಪದ್ಮಯ್ಯ ಆಗ್ರಹಿಸಿದ್ದಾರೆ.