ನವದೆಹಲಿ, (ಫೆಬ್ರವರಿ 08): ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಂದರೆ ಮೂರನೇ ಬಾರಿ ಪ್ರಧಾನಿಯಾಗಲು ಕಸರತ್ತು ನಡೆಸಿದ್ದಾರೆ. ಮತ್ತೊಂದೆಡೆ ಈ ಬಾರಿ ಬಿಜೆಪಿಯನ್ನು ಮಣಿಸಲೇಬೇಕೆಂದು ಇಂಡಿಯಾ ಒಕ್ಕೂಟ ಸಜ್ಜಾಗಿವೆ. ಇದರ ಮಧ್ಯೆ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬಿದ್ದಿದ್ದು, ಎನ್‌ಡಿಎ ಮೈತ್ರಿಕೂಟ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ ಇಂದು ಚುನಾವಣೆ ನಡೆದರೆ ಎನ್‌ಡಿಎ ಬಹುಮತ ಪಡೆಯಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 335 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ಒಟ್ಟಾರೆಯಾಗಿ ಎನ್‌ಡಿಎ ಮೈತ್ರಿಕೂಟವು ಈ ಬಾರಿ 18 ಸ್ಥಾನಗಳನ್ನು ಕಳೆದುಕೊಳ್ಳಲಿದ್ದು, ಇಂಡಿಯಾ ಒಕ್ಕೂಟಕ್ಕೆ ಲಾಭದಾಯಕವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
ಇಂಡಿಯಾ ಟುಡೆ ಪ್ರಕಾರ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು..?
ನರೇಂದ್ರ ಮೋದಿ – ಶೇ.52 ರಾಹುಲ್ ಗಾಂಧಿ – ಶೇ.16
ಇಂಡಿಯಾ ಟುಡೇ ಪ್ರಕಾರ ಯಾರು ಎಷ್ಟು ಗೆಲ್ಲಲಿದ್ದಾರೆ?
- ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ, ಉತ್ತರ ಭಾರತದ 180 ಲೋಕಸಭಾ ಸ್ಥಾನಗಳ ಪೈಕಿ ಎನ್‌ಡಿಎ 154 ಸ್ಥಾನಗಳಲ್ಲಿ ಗೆದ್ದರೆ ಇಂಡಿಯಾ ಒಕ್ಕೂಟ 25 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ತಿಳಿಸಿದೆ.
- ಪೂರ್ವ ಭಾರತದಲ್ಲಿನ 153 ಲೋಕಸಭಾ ಸ್ಥಾನಗಳಲ್ಲಿ ಎನ್‌ಡಿಎ 103 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ ಮತ್ತು ಇಂಡಿಯಾ ಒಕ್ಕೂಟ 38 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಹನ್ನೆರಡು ಸ್ಥಾನಗಳನ್ನು ಇತರೆ ಪಕ್ಷಗಳು ಅಥವಾ ಪಕ್ಷೇತರರು ಗೆಲ್ಲುವ ಸಾಧ್ಯತೆ ಇದೆ.
- ಪಶ್ಚಿಮ ಭಾರತದಲ್ಲಿ 78 ಲೋಕಸಭಾ ಸ್ಥಾನಗಳಲ್ಲಿ, ಎನ್‌ಡಿಎ 51 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು, ಇಂಡಿಯಾ ಒಕ್ಕೂಟ 27 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.
- ದಕ್ಷಿಣ ಭಾರತದಲ್ಲಿ 132 ಲೋಕಸಭಾ ಸ್ಥಾನಗಳಲ್ಲಿ ಎನ್‌ಡಿಎ 27 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದ್ದು, ಇಂಡಿಯಾ ಒಕ್ಕೂಟ 76 ಸ್ಥಾನಗಳನ್ನು ಪಡೆಯುವ ಸಾಧ್ಯತೆಗಳಿವೆ. ಇನ್ನು 29 ಸ್ಥಾನಗಳನ್ನು ಇತರ ಪಕ್ಷಗಳು ಅಥವಾ ಪಕ್ಷೇತರ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಯಿದೆ..
ಕರ್ನಾಟಕದಲ್ಲಿ ಯಾರು ಎಷ್ಟು ಸೀಟು ಗೆಲ್ಲಲಿದ್ದಾರೆ?
ಟೈಮ್ಸ್ ನೌ ಮತ್ತು ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ ಕ್ರಮವಾಗಿ ಬಿಜೆಪಿ 24 ಮತ್ತು 21 ಹಾಗೂ ಕಾಂಗ್ರೆಸ್ 4 ಮತ್ತು ಐದು ಸೀಟುಗಳನ್ನು ಗೆಲ್ಲಲಿದೆ. ಹಾಗೆಯೇ, ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ ಬಿಜೆಪಿ ಮತ್ತು ಜೆಡಿಎಸ್ ಶೇ.53ರಷ್ಟು ಮತ ಗಳಿಸಲಿದ್ದು, ಕಾಂಗ್ರೆಸ್ ಶೇ.42 ಮತ ಪಡೆಯಲಿದೆ. ಇನ್ನು ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ ಬಿಜೆಪಿ ಮತ್ತು ಜೆಡಿಎಸ್ ಶೇ.54.6 ಹಾಗೂ ಕಾಂಗ್ರೆಸ್ ಶೇ.42.3ರಷ್ಟು ಮತಗಳನ್ನು ಪಡೆಯಲಿದೆ.
ಶೇಕಡವಾರು ಮತ ಹಂಚಿಕೆ ಹೇಗಿದೆ?
ಇಂಡಿಯಾ ಟುಡೇ ಮತ್ತು ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ, 2024ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 366 ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟವು 104 ಸ್ಥಾನಗಳನ್ನು ಪಡೆಯಲಿದೆ. ಇನ್ನು 76 ಕ್ಷೇತ್ರಗಳು ಇತರರ ಪಾಲಾಗಲಿವೆ ಎಂದು ಸಮೀಕ್ಷೆಯಲ್ಲಿ ತಿಳಿಸಿವೆ. ಇನ್ನು ಶೇಕಡವಾರು ಮತಗಳ ಹಂಚಿಕೆಯನ್ನು ನೋಡುವುದಾದರೆ ಇಂಡಿಯಾ ಟುಡೇ ಮತ್ತು ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ, ಎನ್‌ಡಿಎ ಶೇ.41.8ರಷ್ಟು ಮತಗಳನ್ನು ಪಡೆಯಲಿದ್ದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟವು ಶೇ.28.6 ಮತ ಪ್ರಮಾಣ ಗಳಿಸಲಿದೆ. ಇನ್ನು ಇತರ ಪಕ್ಷಗಳು ಶೇ.29.6ರಷ್ಟು ಮತಗಳಿಸಲಿವೆ.
ಎನ್‌ಡಿಎ ಪರ ಜನರ ಒಲವೇಕೆ?
- ಪ್ರಧಾನಿ ನರೇಂದ್ರ ಮೋದಿ ಪ್ರಬಲ ನಾಯಕತ್ವ
- ಭ್ರಷ್ಟಾಚಾರ ರಹಿತ 10 ವರ್ಷಗಳ ಆಡಳಿತ
- ರಾಹುಲ್‌ಗಾಂಧಿ ವಿಫಲ ನಾಯಕತ್ವಕ್ಕೆ ಕಾಂಗ್ರೆಸ್ ಮನ್ನಣೆ
- 28 ಪಕ್ಷಗಳ I.N.D.I.A ಮೈತ್ರಿಕೂಟ ಛಿದ್ರವಾಗಿದ್ದು
- ದೇಶದಲ್ಲಿ ಪ್ರಬಲ ವಿರೋಧ ಪಕ್ಷದ ಕೊರತೆ
- ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ
- ಭಾರಿ ವೇಗದಲ್ಲಿ ರಸ್ತೆ, ರೈಲ್ವೆ ಸೌಕರ್ಯ ಅಭಿವೃದ್ದಿ
- ವಿಶ್ವದಲ್ಲೇ ಅತಿ ವೇಗವಾಗಿ ಆರ್ಥಿಕ ಬೆಳವಣಿಗೆ
- ಮೋದಿ ಬಗ್ಗೆ ವಿಶ್ವದ ನಾಯಕರಿಂದ ಪ್ರಶಂಸೆ
- ಭಾರತದ ಬಗ್ಗೆ ವಿಶ್ವ ನೋಡುವ ನೋಟ ಬದಲಾವಣೆ
- ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತದಂತಹ ಯೋಜನೆಗಳು
- ರೈತರಿಗೆ, ಮಹಿಳೆಯರಿಗೆ, ವೃದ್ದರಿಗೆ ಕೇಂದ್ರ ಯೋಜನೆಗಳ ನೇರ ಲಾಭ
- ಬಿಜೆಪಿ ಬಹುಸಂಖ್ಯಾತ ಹಿಂದುತ್ವದ ಪರ, ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ
- 2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಬದಲಾವಣೆ ಭರವಸೆ
ಎನ್‌ಡಿಎ ದಕ್ಷಿಣದಲ್ಲಿ ಎಷ್ಟು ಸ್ಥಾನ ಗೆದ್ದಿತ್ತು?
2019ರ ಲೋಕಸಭೆ ಚುನಾವಣೆಯಲ್ಲಿ ಒಟ್ಟು 545 ಸ್ಥಾನಗಳ ಪೈಕಿ ಎನ್‌ಡಿಎ ಮೈತ್ರಿಕೂಟ 353 ಸ್ಥಾನಗಳನ್ನು ಗೆದ್ದಿತ್ತು. ಇನ್ನು ಬಿಜೆಪಿ ಮಾತ್ರ 303 ಸ್ಥಾನಗಳನ್ನು ಜಯಗಳಿಸಿತ್ತು. ಇನ್ನು ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಕರ್ನಾಟಕದಲ್ಲಿ 25 ಮತ್ತು ತೆಲಂಗಾಣದಲ್ಲಿ 4 ಸ್ಥಾನಗಳನ್ನು ಗೆದ್ದಿತ್ತು. ದಕ್ಷಿಣ ಭಾರತದ ಇತರ ಮೂರು ರಾಜ್ಯಗಳಲ್ಲಿ ಅಂದರೆ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಎನ್‌ಡಿಎ ಖಾತೆ ತೆರೆದಿರಲಿಲ್ಲ.