ಅಂಕೋಲಾ: ಸಾಹಿತ್ಯದ ಜೀವನ ಭೋಗಕ್ಕಿಲ್ಲ ತ್ಯಾಗಕ್ಕಾಗಿ. ಅದು ನಮ್ಮನ್ನ ಮನುಷ್ಯನನ್ನಾಗಿ ಪರಿವರ್ತಿಸುತ್ತದೆ ಎಂದು ಕರ್ನಾಟಕ ಕೇಂದ್ರಿಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ವಿಕ್ರಮ ವಿಸಾಜಿ ಹೇಳಿದರು.
ತಾಲ್ಲೂಕಿನ ನಾಡವರ ಸಭಾಭವನದಲ್ಲಿ ನಡೆದ ಅಂಕೋಲಾ ತಾಲ್ಲೂಕು 10ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಸಮಾರೋಪ ಭಾಷಣ ಮಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಿ ವೈದ್ಯ ಹನುಮಂತ ಗೌಡ, ಶಿಲ್ಪಿಯ ಕೆಟ್ಟನೆಯಂತೆ ಸಾಹಿತ್ಯ ಬರಹ ಮೊನಾಚಾಗಿದ್ದು ಅದು ಸಮಾಜವನ್ನು ಎಚ್ಚರಿಸುತ್ತದೆ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಯುವ ಜನರಲ್ಲಿ ಸಾಹಿತ್ಯ ಆಸಕ್ತಿ ಕಡಿಮೆಯಾಗಿದೆ. ಮುಂದೆ ಸಾಹಿತ್ಯ ಕಾರ್ಯಕ್ರಮಗಳ ಮೂಲಕ ಯುವಕರಿಗೆ ಆಸಕ್ತಿ ಮೂಡಿಸುವ ಪ್ರಯತ್ನ ಸಾಗಲಿ. ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಶಿಸ್ತುಬದ್ಧವಾಗಿ ಸಮಾರೋಪಗೊಂಡಿದೆ. ಒಂದಿಷ್ಟು ಬದಲಾವಣೆಗೆ ಸಾಹಿತ್ಯ ಸಮ್ಮೇಳನ ಕಾರಣವಾಗುತ್ತದೆ. ಸೌಹಾರ್ದ ಜಿಲ್ಲೆ ಎಂದಿಗೂ ಸೌಹಾರ್ದವಾಗಿಯೇ ಇರಲಿ ಎಂದರು.
ಸಮ್ಮೇಳನಾಧ್ಯಕ್ಷ ನಾಗೇಶದೇವ ಅಂಕೋಲೆಕರ ಸಮ್ಮೇಳನದ ಎಲ್ಲಾ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಜರುಗಿದೆ ಎಂದರು.
ಕಸಾಪ ಕೋಶಾಧ್ಯಕ್ಷ ಎಸ್.ವಿ.ವಸ್ತ್ರದ ನಿರ್ಣಯಗಳನ್ನು ಪ್ರಸ್ತುತ ಪಡಿಸಿದರು. ಮೀನುಗಾರಿಕೆಗೆ ಆದ್ಯತೆ ನೀಡಬೇಕು. ಕರಾವಳಿಯೇ ಇಲ್ಲದ ಬೀದರ್ ನಲ್ಲಿರುವ ಮೀನುಗಾರಿಕಾ ವಿಶ್ವ ವಿದ್ಯಾಲಯವನ್ನು ಜಿಲ್ಲೆಗೆ ಸ್ಥಳಾಂತರಿಸಬೇಕು. ಕೃಷಿಯ ಉಳಿವಿಗೆ ಕ್ರಮ ಕೈಗೊಳ್ಳಬೇಕು. ಯೋಜನೆಗಳಿಂದ ನಿರಾಶ್ರಿತರಾದವರಿಗೆ ಸೂಕ್ತ ಪುನರ್ವಸತಿ ಸೌಲಭ್ಯ ಮತ್ತು ಉದ್ಯೋಗ ಕಲ್ಪಿಸಬೇಕು. ಅಂಕೋಲಾ ತಾಲ್ಲೂಕಿಗೆ ಸಾಹಿತ್ಯ ಭವನ ನಿರ್ಮಿಸಬೇಕು. ಬ್ರಹತ್ ಯೋಜನೆಗಳಲ್ಲಿ ಸ್ಥಳೀಯ ಪ್ರಾತಿನಿಧ್ಯ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಬಹು ಜನರ ಬೇಡಿಕೆಯಾಗಿರುವ ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ನಿರ್ಣಯಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತಾಲ್ಲೂಕಿನ ಜನಾರ್ಧನ ನಾಯಕ, ಗಣಪತಿ ಶೆಟ್ಟಿ, ಥಾಮಸ್ ಜಾನ್, ದೇವಿ ಗೌಡ, ರಾಘವೇಂದ್ರ ನಾಯ್ಕ, ಶಶಿಕಾಂತ ನಾಯ್ಕ, ನಾಗಪ್ಪ ಗೌಡ, ವಿಜಯಕುಮಾರ ನಾಯ್ಕ, ಸುಭಾಸ್ ಕಾರೇಬೈಲ್, ಉದಯ ರಾಮಚಂದ್ರ ನಾಯ್ಕ, ಇಂದ್ರಕುಮಾರ್ ಗೌಡ, ದಿನೇಶ ಮೇತ್ರಿ, ರಾಘವೇಂದ್ರ ಭಟ್, ಎನ್ ಯು ಷಾರನ್ನು ಸನ್ಮಾನಿಸಲಾಯಿತು. ಪತ್ರಕರ್ತರ ಸಂಘದಿಂದ ಜಿಲ್ಲಾ ಪರಿಷತ್ ಅಧ್ಯಕ್ಷ ಬಿ ಎನ್ ವಾಸರೆ, ಕಸಾಪ ತಾಲ್ಲೂಕು ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಸ್ವಾಗತ ಸಮಿತಿಯ ಅಧ್ಯಕ್ಷ ಮಹೇಶ ಗೋಳಿಕಟ್ಟೆಯವರನ್ನು ಸನ್ಮಾನಿಸಲಾಯಿತು.
ಹಿರಿಯ ಉಪನ್ಯಾಸಕರ ಮಹೇಶ ನಾಯಕ ಸ್ವಾಗತಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಮಹೇಶ ಗೋಳಿಕಟ್ಟೆ ಸ್ವಾಗತಿಸಿದರು. ವೀಣಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ರಾಘು ಕಾಕರಮಠ ವಂದಿಸಿದರು.