ಅಂಕೋಲಾ: ಹಾವೇರಿ ಜಿಲ್ಲೆಯಲ್ಲಿನ ಅತ್ಯಾಚಾರ ಪ್ರಕರಣ ರಾಜ್ಯದಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಸಂತ್ರಸ್ತೆಯ ವಿಚಾರದಲ್ಲಿ ನಡೆಯುತ್ತಿರುವ ತನಿಖೆಯ ಕುರಿತು ವಿರೋಧ ಪಕ್ಷದವರು ಆಕ್ರೋಶ ವ್ಯಕ್ತಪಡಿಸಿದರೆ, ಆಡಳಿತ ಪಕ್ಷದವರು ಪಾರದರ್ಶಕ ತನಿಖೆ ನಡೆಯಲಿದೆ ಎಂದು ಸಮರ್ಥನೆಯಲ್ಲಿ ತೊಡಗಿದ್ದಾರೆ.
ವಿಡಿಯೋ ಸಾಕ್ಷಿಗಳು ಲಭ್ಯವಿದ್ದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಹಲವರ ಅಭಿಪ್ರಾಯ. ಪೋಲಿಸ್ ಇಲಾಖೆ ನಿಷ್ಕ್ರಿಯವಾಗಿದೆ. ಹಾಗಾಗಿ ಹಲ್ಲೆ ಅತ್ಯಾಚಾರ ಪ್ರಕರಣ ನಡೆಯುತ್ತಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಸೂಕ್ತ ತನಿಖೆ ನಡೆಸಲು ಎಸ್ ಐಟಿ ರಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಭಂದಿಸಿ ವಿಳಂಬ ಧೋರಣೆ ಅನುಸರಿಸಿದ ಹಾಗೂ ಕರ್ತವ್ಯ ಲೋಪದ ಆರೋಪದಡಿ ಪೋಲಿಸ್ ಇಲಾಖೆಯ ಇಬ್ಬರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶ್ರೀಧರ್ ಎಸ್.ಆರ್ ಹಾಗೂ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತು ಮಾಡಲಾಗಿದೆ.
ಕೇವಲ ಅನೈತಿಕ ಪೋಲಿಸ್ ಗಿರಿ ಆರೋಪದ ಮೇಲೆ ಮೊದಲು ಪ್ರಕರಣ ದಾಖಲಿಸಲಾಗಿತ್ತು. ಸಂತ್ರಸ್ತೆಯ ಹೇಳಿಕೆಯ ನಂತರ 376–ಡಿ’ ಸೆಕ್ಷನ್ ಅನ್ನು ದೂರಿನಲ್ಲಿ ಸೇರಿಸಲಾಯಿತು. ಪ್ರಕರಣದ ತನಿಖೆ, ಮಾಹಿತಿ ಸಂಗ್ರಹಣೆ, ದೂರು ದಾಖಲಿಸಲು ನಿರ್ಲಕ್ಷ ಮತ್ತು ಆರೋಪಿಗಳನ್ನು ಬಂಧಿಸುವಲ್ಲಿ ನಿಧಾನಗತಿ ಕಾರಣಗಳಿಂದ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹಾನಗಲ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶ್ರೀಧರ್ ಎಸ್.ಆರ್ ಜಿಲ್ಲೆಯ ಅಂಕೋಲಾ ಮತ್ತು ಹೊನ್ನಾವರ ತಾಲೂಕುಗಳಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸಿದ್ದರು. ಪ್ರವಾಹ ಮತ್ತು ಕೋವಿಡ್ ಸಂದರ್ಭದಲ್ಲಿ ಮಾನವೀಯ ಸೇವೆಗಳಿಗಾಗಿ ಜನ ಮೆಚ್ಚುಗೆ ಗಳಿಸಿದ್ದರು. ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಾಗಿ ಕೈಜೋಡಿಸುತ್ತಿದ್ದರು.
ಮಾಹಿತಿ ತಂತ್ರಜ್ಞಾನದಲ್ಲಿ ವಿಶೇಷ ಪರಿಣಿತಿ ಹೊಂದಿರುವವರು ಸೈಬರ್ ಕ್ರೈಂ ಸೇರಿದಂತೆ ಅನೇಕ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು. ಅವರ ವರ್ಗಾವಣೆಗೆ ಜಿಲ್ಲೆಯ ಜನರು ವಿಷಾದ ವ್ಯಕ್ತಪಡಿಸಿದ್ದರು.
ಹೀಗಿದ್ದರೂ ಹಾವೇರಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒತ್ತಡಗಳ ಕಾರಣದಿಂದಲೋ ಅಥವಾ ಇನ್ನಾವುದೋ ಪ್ರಲೋಭನೆಗಳಿಂದ ಕರ್ತವ್ಯದಲ್ಲಿ ವಿಳಂಬ ಧೋರಣೆ ಅನುಸರಿಸಿದ್ದರೇ? ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಅಧಿಕಾರಿಗಳು ಹೈರಾಣಾಗಿದ್ದಾರೆಯೇ ಎನ್ನುವುದು ಪ್ರಶ್ನೆಯಾಗಿದೆ.