ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಫೆ. 13-14 ರಂದು ಬೆಂಗಳೂರಿನಲ್ಲಿ ಬೃಹತ ಪ್ರತಿಭಟನೆ

ಅಂಕೋಲಾ : ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಮಾಸಿಕ ವೇತನ 15 ನಿಗದಿ ಮಾಡುವಂತೆ ಮತ್ತು ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಫೆ. 13-14 ನಲ್ಲಿ ರಾಜ್ಯ ಮಟ್ಟದ ‘ವಿಧಾನ ಸೌಧ ಚಲೋ’ ಬೃಹತ್ ಪ್ರತಿಭಟನೆಯ ಹಿನ್ನಲೆಯಲ್ಲಿ ಅಂಕೋಲಾ ತಾಲೂಕು ಮಟ್ಟದ ಸಮಾವೇಶವು ಪಟ್ಟಣದಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಉಕ ಜಿಲ್ಲಾ ಸಲಹೆಗಾರ ಗಂಗಾಧರ ಬಡಿಗೇರ ಮಾತನಾಡಿ 8 ವರ್ಷಗಳ ಹಿಂದೆ ರಾಜ್ಯ ಸರ್ಕಾರ, ಜಾರಿಗೊಳಿಸಿದ ಆರ್.ಸಿ.ಹೆಚ್ ಪೋರ್ಟಲ್‌ಗೆ ಲಿಂಕ್ ಮಾಡಿದ್ದು ಆಶಾ ಕಾರ್ಯಕರ್ತೆಯರಿಗೆ ದೊಡ್ಡ ಶಾಪವಾಗಿದೆ. ವಿವಿಧ ದಾಖಲೆಗಳ ಪ್ರಕಾರ ಪ್ರತಿ ತಿಂಗಳು ಕನಿಷ್ಠ ಶೇ.25-30ರಷ್ಟು ಅಂದರೆ 10,000 ರಿಂದ 12,000 ಆಶಾಗಳು ಆರ್.ಸಿ.ಹೆಚ್ ಪೋರ್ಟಲ್‌ನ ಸಮಸ್ಯೆಗಳಿಂದ ದೊಡ್ಡ ಮೊತ್ತದ ನಷ್ಟಕ್ಕೆ ಒಳಗಾಗಿದ್ದಾರೆ.

ಆಶಾಗಳು ಕಷ್ಟ ಪಟ್ಟುದುಡಿದ ಹಣ ಸೋರಿಕೆಯಾಗುತ್ತಲೇ ಇದೆ. ಈ ಹಣಎಲ್ಲಿ ಹೋಗುತ್ತಿದೆ?ಎಂಬ ಪ್ರಶ್ನೆ ಆಶಾಗಳನ್ನು ಕಾಡುತ್ತಲೇ ಇದೆ. ಇದನ್ನು ಸರಿಪಡಿಸುವಂತೆ ಸಂಘವು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದೆ, ಆರೋಗ್ಯ ಸಚಿವರ ಹಾಗೂ ಉನ್ನತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದೆ. ಸಾಕಷ್ಟು ದಾಖಲೆಗಳನ್ನ ಸಹ ಸಂಘವು ನೀಡಿದೆ. ಆದರೂ ಆರೋಗ್ಯ ಇಲಾಖೆ ಹೇಗಾದರೂ ಈ ಪೋರ್ಟಲ್‌ಗೆ ಲಿಂಕ್ ಮಾಡಿ ಪ್ರೋತ್ಸಾಹಧನ ನೀಡುವ ಮಾದರಿಯನ್ನು ಉಳಿಸಿಕೊಳ್ಳುವ ತನ್ನ ಹಠಮಾರಿಧೋರಣೆನ್ನು ಮುಂದುವರೆಸಿದೆ ಎಂದರು.

ಈ ಎಲ್ಲ ಸಮಸ್ಯೆಗಳ ಏಕೈಕ ಪರಿಹಾರವೆಂದರೆ ಆಶಾಗಳ ವೇತನ ಪಾವತಿ ಪ್ರಕ್ರಿಯೆಯನ್ನು ಆರ್.ಸಿ.ಹೆಚ್ ಪೋರ್ಟಲ್ ನಿಂದ ಡಿ-ಲಿಂಕ್ ಮಾಡುವುದು. ಈ ಹಿನ್ನಲೆಯಲ್ಲಿ, ಈ ಬೇಡಿಕೆಯ ಜೊತೆಗೆ ರೂ.15,000 ನಿಶ್ಚಿತ ವೇತನ ನೀಡುವಂತೆ, ಇನ್ನಿತರ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಅಂಕೋಲಾ ತಾಲ್ಲೂಕು ಸೇರಿದಂತೆ ಜಿಲ್ಲೆ ಎಲ್ಲ ಆಶಾ ಸೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷೆ ಚಂದ್ರಕಲಾ ಒ ನಾಯ್ಕ, ಉಪಾಧ್ಯಕ್ಷರಾದ ಶಾರದಾ ನಾಯಕ, ನಾಗರತ್ನಾ ನಾಯಕ, ಮಾಲತಿ ನಾಯಕ, ಸುನಿತಾ ಗುಣಗಾ, ಜುಲೇಕಾ,ತಾರಾ ನಾಯ್ಕ, ಕಾರ್ಯದರ್ಶಿ ಸಂಗೀತಾ ನಾಯ್ಕ ಜಂಟಿ ಕಾರ್ಯದರ್ಶಿಗಳಾದ ಸವಿತಾ ಬಿ ನಾಯಕ, ಗಿರಿಜಾ ವೆರ್ಣೇಕರ್ ಸದಸ್ಯರಾದ ಸೌಭಾಗ್ಯ ಬಂಟ, ಪ್ರತಿಭಾ ನಾಯಕ, ರೂಪಾ ನಾಯ್ಕ, ರೋಹಿಣಿ ಗೌಡ, ಪ್ರೀತಿ ಭಂಟ್ ಸೇರಿದಂತೆ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.