ಗುಣವಂತೆಯಲ್ಲಿ ಭಾನುವಾರ ಸಪ್ತಕ ಅರ್ಪಿಸುವ ಅಂಗದ ಸಂಧಾನ ತಾಳ ಮದ್ದಳೆ

ಹೊನ್ನಾವರ : ಬೆಂಗಳೂರಿನ ಸಪ್ತಕ ಸಂಸ್ಥೆಯ ಜಿ.ಎಸ್.ಹೆಗಡೆ ನೇತೃತ್ವದಲ್ಲಿ ಗುಣವಂತೆಯ ಶ್ರೀ ಶಂಭುಲಿಂಗೇಶ್ವರ ದೇವಾಲಯದ ಪ್ರಾಂಗಣದಲ್ಲಿ ಭಾನುವಾರ ಸಂಜೆ 6ಗಂಟೆಗೆ ಅಂಗದ ಸಂಧಾನ ತಾಳ ಮದ್ದಳೆ ನಡೆಯಲಿದೆ.

ಭಾಗವತರಾಗಿ ಜೋಗಿಮನೆಯ ಗೋಪಾಲಕೃಷ್ಣ ಭಟ್‌, ಮದ್ದಳೆ ವಾದಕರಾಗಿ ಹರಿಕೇರಿಯ ಪಿ.ಕೆ.ಹೆಗಡೆ, ಅಂಗದನಾಗಿ ಜಬ್ಬಾರ್‌ ಸುಮೊ, ಪ್ರಹಸ್ತನಾಗಿ ಖ್ಯಾತ ತಾಳಮದ್ದಳೆ ಅರ್ಥಧಾರಿ ನಾರಾಯಣ ಯಾಜಿ, ರಾವಣನಾಗಿ ಲಕ್ಷ್ಮಿಕಾಂತ್‌ ಕೊಂಡದಕುಳಿ, ರಾಮನಾಗಿ ಗುಣವಂತೆಯ ಶ್ರೀಧರ ಹೆಗಡೆ ಕೆರೆಮನೆ ಪಾತ್ರ ನಿರ್ವಹಿಸಲಿದ್ದಾರೆ…

ಸಂಗೀತ ಸೇವೆಗಾಗಿಯೇ ಜನ್ಮತಾಳಿರುವ ಸಪ್ತಕ ಸಂಸ್ಥೆ ದಶಕಗಳಿಂದಲೂ ಯಕ್ಷಗಾನ ಮತ್ತು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಈ ಎರಡೂ ಪ್ರಕಾರಗಳಲ್ಲೂ ಅವಿರತವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ಮೂಲತಃ ಹೊನ್ನಾವರ ತಾಲೂಕಿನ ಅಣ್ಣುಹಿತ್ತಲಿನವರಾದ ಜಿ.ಎಸ್.ಹೆಗಡೆಯವರು ಬೆಂಗಳೂರಿನಲ್ಲಿ ಸಪ್ತಕ ಸಂಸ್ಥೆಯನ್ನು ಕಟ್ಟಿ ಯುವ ಕಲಾವಿದರಿಗೆ ವೇದಿಕೆ ದೊರಕಿಸಿಕೊಟ್ಟು ಬೆಳಕಿಗೆ ತರುತ್ತಿದ್ದಾರೆ. ಹಾಗೇ ತಮ್ಮ ಹುಟ್ಟೂರಿನಲ್ಲಿ ಒಂದಲ್ಲಾ ಒಂದು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇಲ್ಲಿನ ಮೂಲ ಸಂಸ್ಕೃತಿ ಮತ್ತು ಪರಂಪರೆಯನ್ನು ಕಟ್ಟಿ ಬೆಳಸುವ ಪ್ರಯತ್ನ ಮಾಡುತ್ತಿದ್ದಾರೆ…