ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ.! ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೆ ಏರುವುದು ಯಾವಾಗ.?

ದಾಂಡೇಲಿ: ತಾಲೂಕಾ ಆಸ್ಪತ್ರೆಗೆ ಬರುವ ರೋಗಿಗಳಿಗಿಂತ ಹೆಚ್ಚಿನ ರೋಗಿಗಳು ನಗರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ. ತುರ್ತು ಸಂದರ್ಭದಲ್ಲಿ ರೋಗಿಗಳು ಚಿಕಿತ್ಸೆ ಪಡೆಯುವುದೇ ಕಷ್ಟವಾಗಿದೆ. ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಅಥವಾ ಧಾರವಾಡಕ್ಕೆ ಹೋಗುವುದು ಅನಿವಾರ್ಯವಾಗಿದೆ. ಈ ಮಧ್ಯೆ ಆಸ್ಪತ್ರೆಯಲ್ಲಿ ಇರುವ ವೈದ್ಯರು ಮತ್ತು ಸಿಬ್ಬಂದಿಗಳೇ ಸದ್ಯ ಉತ್ತಮ ಸೇವೆ ನೀಡುತ್ತಿರುವುದು ಖುಷಿಯ ವಿಚಾರವಾಗಿದೆ.

ವೈದ್ಯರು, ಸಿಬ್ಬಂದಿಗಳಿಲ್ಲದೆ ಆಸ್ಪತ್ರೆಗಳು ಖಾಲಿ ಖಾಲಿ.!

ಸಾರ್ವಜನಿಕ ಆಸ್ಪತ್ರೆಯಲ್ಲಿ ಸೀನಿಯರ್ ಸರ್ಜನ್ ಸೇರಿದಂತೆ ಅವಶ್ಯಕ ತಜ್ಞ ವೈದ್ಯರ ಕೊರತೆ ತಲೆದೋರಿದ್ದು, ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರೂ 20 ಶುಶ್ರೂಶಕಿಯರೂ ಹಾಗೂ ನುರಿತ ತಜ್ಞ ವೈದ್ಯರ ಅಗತ್ಯವಿದೆ. ಅದಲ್ಲದೇ ದ್ವೀತಿಯ ದರ್ಜೆ ಸಹಾಯಕ ಹುದ್ದೆ, ಎರಡು ಪ್ರಥಮ ದರ್ಜೆ ಸಹಾಯಕ ಹುದ್ದೆ ಕೂಡ ಖಾಲಿಯಿದೆ.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲೂ ಸಿಬ್ಬಂದಿಗಳಿಲ್ಲ.!

ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಎಂಟು ಜನ ಶುಶ್ರೂಶಕಿಯರ ಅವಶ್ಯಕತೆಯಿದೆ. ಸದ್ಯ ಓರ್ವ ವೈದ್ಯರ ನೇಮಕವಾಗಿದ್ದು, ಇನ್ನೂ ಏಳು ಹುದ್ದೆ ಖಾಲಿಯಿದೆ. ಅಲ್ಲದೇ ಒಂದು ಪ್ರಥಮ ದರ್ಜೆ ಮತ್ತು ಒಂದು ದ್ವಿತೀಯ ದರ್ಜೆ ಸಹಾಯಕ ಹುದ್ದೆ ಕೂಡ ಖಾಲಿ ಉಳಿದಿದೆ.

ಸದ್ಯ ಉದ್ಘಾಟನೆಗೊಂಡ ಆಯುಷ್ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ.!

ನಗರದ ಅಂಬೇವಾಡಿಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಆಯುಷ್ ಆಸ್ಪತ್ರೆ ಕಳೆದ ಫೆಬ್ರುವರಿ 22 ರಂದು ಉದ್ಘಾಟನೆಗೊಂಡಿದೆ. ಪ್ರಾರಂಭವಾಗಿ ಸುಮಾರು 6 ತಿಂಗಳು ಕಳೆದರೂ ಸಹ ಇದುವರೆಗೆ ಖಾಯಂ ವೈದ್ಯರ ನೇಮಕವಾಗಿಲ್ಲ. ಗುತ್ತಿಗೆ ಆಧಾರದಲ್ಲಿ ಒಬ್ಬ ಆಯುರ್ವೇದಿಕ್ ವೈದ್ಯರನ್ನು ನೇಮಕ ಮಾಡಲಾಗಿದ್ದು, ಅಂಕೋಲಾದಿಂದ ನಿತ್ಯ ಬಂದು ಹೋಗುತ್ತಾರೆ. ಜೊತೆಗೆ ಒಬ್ಬ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆಯುಷ್ ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯರು, ಹೋಮಿಯೋಪತಿ ವೈದ್ಯರು, ಒಬ್ಬ ಕ್ಲರ್ಕ್, 2 ಸ್ಟಾಪ್ ನರ್ಸ್ ಸೇರಿದಂತೆ 3 ಗ್ರೂಪ್ ಡಿ ದರ್ಜೆ ನೌಕರರ ಅವಶ್ಯವಿದೆ.

ಇತ್ತೀಚೆಗೆ ದಾಂಡೇಲಿಯನ್ನು ಪ್ರತ್ಯೇಕ ತಾಲೂಕು ಎಂದು ಘೋಷಿಸಿರುವುದರಿಂದ ನಗರದ ಸಾರ್ವಜನಿಕ ಆಸ್ಪತ್ರೆಯನ್ನು ಉನ್ನತೀಕರಣಗೊಳಿಸಬೇಕಾಗಿದೆ. ಇದರಿಂದ ಹೆಚ್ಚಿನ ವೈದ್ಯರು ಆಸ್ಪತ್ರೆಗೆ ಲಭ್ಯರಾಗುತ್ತಾರೆ ಎಂದು ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜೇಶ ಪ್ರಸಾದ ಹೇಳಿದ್ದಾರೆ.