ಕೆಸರು ಗದ್ದೆಯಲ್ಲಿ ವೆರೈಟಿ ಗೇಮ್ಸ್.! ವೃದ್ಧರ ಸವಾಲ್.! ಮಹಿಳೆಯರ ಜವಾಬ್.! ಮೋಡಿ ಮಾಡಿದ ‘ಗ್ರಾಮೀಣ ಕ್ರೀಡೆ’.!

ಕಾರವಾರ: ವಯಸ್ಸಿನ ಅಂತರವಿಲ್ಲದೇ ಗ್ರಾಮೀಣ ಕ್ರೀಡೆಯಲ್ಲಿ ತೊಡಗಿಕೊಂಡಿರೋ ಜನ.! ಮಕ್ಕಳ ಜೊತೆಗೆ ಮಕ್ಕಳಾಗಿ ಹುಮ್ಮಸ್ಸಿನಿಂದ ಆಟವಾಡಿದ ವೃದ್ಧರು.! ತಾವೇನು ಕಮ್ಮಿ ಇಲ್ಲ ಎನ್ನುವಂತೆ ಆಟದಲ್ಲಿ ಪಾಲ್ಗೊಂಡ ಮಹಿಳೆಯರು.! ಇಂತಹ ಗ್ರಾಮೀಣ ಕ್ರೀಡಾಕೂಟಕ್ಕೆ ಸಾಕ್ಷಿಯಾಗಿದ್ದು ತಾಲೂಕಿನ ದೇವಳಮಕ್ಕಿ ಗ್ರಾಮ.

ಹೌದು.! ಗ್ರಾಮೀಣ ಆಟಗಳ ಗಮ್ಮತ್ತೇ ಹಾಗೇ.! ತಂತ್ರಜ್ಞಾನ ಮತ್ತು ವೈಜ್ಞಾನಿಕತೆಯ ಬೆಳವಣಿಗೆಯಿಂದ ಗ್ರಾಮೀಣ ಕ್ರೀಡೆಗಳು ಮೂಲೆಗುಂಪು ಸೇರಿದರೂ ತನ್ನ ಗತ್ತನ್ನ ಎಂದೂ ಕಳೆದುಕೊಂಡಿಲ್ಲ. ಹೀಗಾಗಿ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಪ್ರಥಮ ಬಾರಿಗೆ ಕೆಸರುಗದ್ದೆ ಕ್ರೀಡಾಕೂಟವನ್ನು ಭಾನುವಾರ ಆಯೋಜಿಸಲಾಗಿತ್ತು.

ಸುಂದರ ಪ್ರಕೃತಿ ಮಡಿಲಿನ ಗದ್ದೆಯಲ್ಲಿ ದೇವಳಮಕ್ಕಿ ಬಾಯ್ಸ್ ಕೆಸರುಗದ್ದೆ ಕ್ರೀಡಾಕೂಟವನ್ನು ಹಮ್ಮಿಕೊಂಡಿದ್ದರು. ಕೇರವಡಿ, ದೇವಳಮಕ್ಕಿ, ವೈಲವಾಡ ಪಂಚಾಯಿತಿ ವ್ಯಾಪ್ತಿಯವರಿಗೆ ವಿವಿಧ ಆಟಗಳನ್ನು ಕ್ರೀಡಾಕೂಟದಲ್ಲಿ ಆಯೋಜನೆ ಮಾಡಲಾಗಿತ್ತು.

ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಓಟ, ಚಮಚ-ಲಿಂಬು ನಡಿಗೆ ಸ್ವರ್ಧೆ. ಪುರುಷರಿಗಾಗಿ ಓಟ, ವಾಲಿಬಾಲ್ ಹಾಗೂ ಹಗ್ಗ ಜಗ್ಗಾಟ. ಮಹಿಳೆಯರಿಗಾಗಿ ಓಟ, ಚಮಚ-ಲಿಂಬು ನಡಿಗೆ ಸ್ವರ್ಧೆ, ಥ್ರೋ ಬಾಲ್ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿತ್ತು. ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಭಿಮಾನ ಮೆರೆದಿರಿವುದು ವಿಶೇಷವಾಗಿತ್ತು. 60 ವರ್ಷ ಮೇಲ್ಪಟ್ಟ ವೃದ್ಧರೂ ಸಹ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಭಾಗವಹಿಸಿ ಸೈ ಎನಿಸಿಕೊಂಡರು.

ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ದೇವಳಮಕ್ಕಿ ತಂಡ, ವಾಲಿಬಾಲ್‌ನಲ್ಲಿ ನಿವಳಿ ಗ್ರಾಮ, ಮಹಿಳೆಯರ ಥ್ರೋ ಬಾಲ್ ಪಂದ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳ ತಂಡ, ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಆಶಾ ಕಾರ್ಯಕರ್ತೆಯರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದವು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಲ್ಲಾಪುರ ಪೊಲೀಸ್ ಠಾಣೆಯ ಎಸ್‌ಐ ಸಿದ್ದಪಾ ಗುದ್ದಿ, ಕೈಂ ಸಬ್ ಇನ್ಸ್ ಪೆಕ್ಟರ್ ಪ್ರತಾಪ್, ಉಪವಲಯ ಅರಣ್ಯಾಧಿಕಾರಿ ಸುಭಾಷ್ ರಾಥೋಡ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವನಶ್ರೀ ಕುಲಕರ್ಣಿ, ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಗೌಡ, ದೇವಳಮಕ್ಕಿ ಬಾಯ್ಸ್ ಸದಸ್ಯರಾದ ಸುನಿಲ್ ಶೇಟ್, ಮರಿ ಗೌಡ, ಅಗ್ನೇಲ್ ಡಿಸೋಜಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.