ಯಲ್ಲಾಪುರ: ಕಂಪ್ಲಿ ಗ್ರಾ.ಪಂ ವ್ಯಾಪ್ತಿಯ ಕೆರೆಹೊಸಳ್ಳಿಯಲ್ಲಿ ಏತನೀರಾವರಿ ಯೋಜನೆ ಅನುಷ್ಠಾನ ಹಾಗೂ ಉದ್ಘಾಟನೆಯ ಸಂದರ್ಭದಲ್ಲಿ ಸ್ಥಳೀಯ ಸದಸ್ಯರು ಹಾಗೂ ಗ್ರಾ.ಪಂ ಅಧ್ಯಕ್ಷರಿಗೆ ಮಾಹಿತಿ ನೀಡದೇ, ಕಡೆಗಣಿಸಿರುವ ಕುರಿತು ಕಂಪ್ಲಿ ಗ್ರಾ.ಪಂ ಅಧ್ಯಕ್ಷೆ ರೇಣುಕಾ ಬೋವಿವಡ್ಡರ್ ಆಕ್ಷೇಪ ವ್ಯಕ್ತಪಡಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಣ್ಣ ನೀರಾವರಿ ಇಲಾಖೆಯಿಂದ ಕೆರೆಹೊಸಳ್ಳಿ
ಏತ ನೀರಾವರಿ ಯೋಜನೆಯನ್ನು 3.75 ಲಕ್ಷ ರೂ ವೆಚ್ಚದಲ್ಲಿ ಮಾಡಲಾಗಿದ್ದು, ಯೋಜನೆಯ ಅಸಮರ್ಪಕತೆಯಿಂದ ಸೀಮಿತ ಜನರಿಗೆ ಮಾತ್ರ ತಲುಪುವಂತಾಗಿದೆ. ಈ ಕುರಿತು ಗ್ರಾಮಸ್ಥರು ಗ್ರಾ.ಪಂ ಸದಸ್ಯರನ್ನು ದೂರುತ್ತಿದ್ದಾರೆ. ಆದರೆ ಯೋಜನೆಯ ರೂಪುರೇಷೆ, ಅನುಷ್ಠಾನ, ಉದ್ಘಾಟನೆ ಎಲ್ಲವೂ ಅಧಿಕಾರಿಗಳ ದರ್ಬಾರಿನಲ್ಲಿ ನಡೆದಿದೆ. ಗ್ರಾ.ಪಂನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ದೂರಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಗ್ರಾ.ಪಂ ಕೇವಲ ಮಾಧ್ಯಮವಾಗಿ ಬಳಕೆಯಾಗುತ್ತಿದೆ. ಆದರೆ ಜನಪ್ರತಿನಿಧಿಗಳಿಗೆ ಯಾವುದೇ ಮಾನ್ಯತೆ ನೀಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಯಾ ಗ್ರಾ.ಪಂ ಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುವಾಗ ಅಲ್ಲಿನ ಜನರು, ಜನಪ್ರತಿನಿಧಿಗಳ ವಿಶ್ವಾಸಕ್ಕೆ ತೆಗೆದುಕೊಂಡೇ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಆಗ್ರಹಿಸಿದರು.
ಗ್ರಾ.ಪಂ ಉಪಾಧ್ಯಕ್ಷ ಸದಾಶಿವ ಚಿಕ್ಕೊತ್ತಿ, ಸದಸ್ಯ ಎಂ.ಕೆ.ಭಟ್ಟ ಯಡಳ್ಳಿ ಇದ್ದರು.