ಭಟ್ಕಳ: ಸಂವಿಧಾನ ನಮಗೆ ಹಕ್ಕುಗಳ ಜೊತೆಗೆ ಕರ್ತವ್ಯವನ್ನೂ ತಿಳಿಸುತ್ತದೆ- ಡಾ.ನಯನಾ


ಭಟ್ಕಳ: ಭಾರತ ಸಂವಿಧಾನವು ನಮಗೆ ಕೇವಲ ಹಕ್ಕುಗಳನ್ನಷ್ಟೇ ನೀಡಿಲ್ಲ ಅದರ ಜೊತೆಗೆ ನಮ್ಮ ನಮ್ಮ ಕರ್ತವ್ಯಗಳನ್ನೂ ಹೇಳಿಕೊಡುತ್ತದೆ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಡಾ.ನಯನಾ ಹೇಳಿದರು.
ಅವರು ಶುಕ್ರವಾರ ಇಲ್ಲಿನ ತಾಲೂಕು ಕ್ರಿಡಾಂಗಣದಲ್ಲಿ ಜರುಗಿದ ಗಣರಾಜ್ಯೋತ್ಸವ ಸಮಾರಂಭದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಶ್ರೀಮಂತನಾಗಲಿ, ಬಡವನಾಗಲಿ, ಪ್ರಭಲ ರಾಜಕಾರಣಿಯಾಗಲಿ ಅಥವಾ ಸಾಮಾನ್ಯನಾಗಲಿ ಎಲ್ಲರಿಗೂ ಸಮಾನ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ ಸಂವಿಧಾನದ ಆಶಯಗಳೊಂದಿಗೆ ನಾವೆಲ್ಲರೂ ಬದುಕಬೇಕೆಂದು ಕರೆ ನೀಡಿದರು.
ತಹಸಿಲ್ದಾರ್ ತಿಪ್ಪೆಸ್ವಾಮಿ ಸ್ವಾಗತಿಸಿದರು. ಶಿಕ್ಷಕ ಶ್ರೀಧರ್ ಶೇಟ್ ಕಾರ್ಯಕ್ರಮ ನೆರವೇರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೊಗೇರ್ ಧನ್ಯವಾದ ಅರ್ಪಿಸಿದರು.
ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಎನ್.ಎಂ.ಮೇಸ್ತಾ, ಭಟ್ಕಳ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ನಾಯ್ಕ, ಭಟ್ಕಳ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಮ್ ಡಿವೈ.ಎಸ್ಪಿ ಶ್ರೀಕಾಂತ್ ಪಿ. ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.