ಸಂಭ್ರಮದಿಂದ ಜರುಗಿದ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ವಾರ್ಷಿಕೋತ್ಸವ

.

ಅಂಕೋಲಾ: ಅಂಕೋಲಾ ತಾಲ್ಲೂಕಿನ ಶೇಟಗೇರಿಯ ರಾಷ್ಟ್ರೀಯ ಸತ್ಯಾಗ್ರಹ ಸ್ಮಾರಕ ಶಿಕ್ಷಣ ಸಮಿತಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಶುಕ್ರವಾರ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿನಿ ಮಂಗಳಲಕ್ಷ್ಮೀ ಪಾಟೀಲ್ ಮಾತನಾಡಿ,
ಜೀವನದಲ್ಲಿ ಎಲ್ಲಾ ಸಾಧನೆಗೆ ಮೂಲ ಪ್ರೇರಣೆ ಆತ್ಮ ವಿಶ್ವಾಸ. ವಿದ್ಯಾರ್ಥಿಗಳು ಆತ್ಮ ವಿಶ್ವಾಸವನ್ನು ವರ್ಧಿಸಿಕೊಳ್ಳಬೇಕು. ಯಾವುದೇ ಹುದ್ದೆಗಳನ್ನು ಅಲಂಕರಿಸಿದರೂ ಉತ್ತಮ ನಾಗರೀಕರಾಗಿ ಜೀವನವನ್ನು ನಡೆಸಬೇಕು. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ. ಮಕ್ಕಳಿಗೆ ವಿದ್ಯಾರ್ಥಿ ಹಂತದಲ್ಲಿಯೇ ಪಾಲಕರು ಉತ್ತಮ ಸಂಸ್ಕಾರ ನೀಡಬೇಕು. ಜೀವನಕ್ಕೆ ಅಗತ್ಯ ಸಂಸ್ಕಾರ ಮತ್ತು ಸಾಧನೆಗೆ ಸ್ಫೂರ್ತಿಯನ್ನು ಸತ್ಯಾಗ್ರಹ ಸ್ಮಾರಕ ಶಾಲೆ ನೀಡಿದೆ. ಹಾಗಾಗಿ ಹಳೆಯ ವಿದ್ಯಾರ್ಥಿಗಳು ಈ ಶಾಲೆಯ ಅಭಿವೃದ್ಧಿಗೆ ಬದ್ಧವಾಗಿದ್ದಾರೆ ಎಂದರು. ಆದರ್ಶ ವಿದ್ಯಾರ್ಥಿನಿಗೆ ವೈಯಕ್ತಿಕವಾಗಿ ₹ 10,000 ಬಹುಮಾನ ನೀಡುವುದಾಗಿ ಘೋಷಸಿದರು.
ರಾಷ್ಟ್ರೀಯ ಸತ್ಯಾಗ್ರಹ ಸ್ಮಾರಕ ಶಿಕ್ಷಣ ಸಮಿತಿಯ ಅಧ್ಯಕ್ಷ ರಮಾನಂದ ನಾಯಕ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ರಾಜ್ಯದಲ್ಲಿ ಬಿಸಿಯೂಟ ಯೋಜನೆ ಜಾರಿಗೆ ಬರುವ ಮೊದಲೇ ಈ ಶಾಲೆಯಲ್ಲಿ ಮಧ್ಯಾಹ್ನದ ಊಟ ನೀಡಲಾಗುತ್ತಿತ್ತು. ದಾನಿಗಳ ನೆರವಿನಿಂದ ಪ್ರತಿವರ್ಷ ಉಚಿತ ಸಮವಸ್ತ್ರ ಮತ್ತು ವಾಹನದ ವ್ಯವಸ್ಥೆ ಮಾಡಲಾಗುತ್ತಿದೆ. ದಾನಿಗಳಾದ ಅನಸೂಯ ತೊರ್ಕೆ
₹10 ಲಕ್ಷ ನೀಡಿದ್ದು ಒಟ್ಟಾರೆ ₹47 ಲಕ್ಷದಷ್ಟು ಹಣದ ಸಂಗ್ರಹವಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಉಪನ್ಯಾಸಕ ಶ್ರೀಧರ ನಾಯಕ ಮಾತನಾಡಿ, ಸತ್ಯಾಗ್ರಹ ಸ್ಮಾರಕ ವಿದ್ಯಾಲಯ 60 ವರ್ಷ ಕಳೆದ ಸಂಸ್ಥೆ. ಅನೇಕ ಏಳುಬೀಳುಗಳನ್ನು ಕಂಡು ಅಪಾರ ಅನುಭವ ಹೊಂದಿದೆ. ಆಂಗ್ಲ ಮಾಧ್ಯಮ ಮತ್ತು ನಗರ ಶಾಲೆಗಳ ಸ್ಪರ್ಧೆಯ ನಡುವೆಯೂ ಗ್ರಾಮೀಣ ಪ್ರದೇಶದಲ್ಲಿರುವ ತನ್ನ ಸಾಮರ್ಥ್ಯದಿಂದ ಬೆಳೆದು ನಿಂತಿದೆ. ಸರ್ವೋದಯದ ಪರಿಕಲ್ಪನೆಯಲ್ಲಿ ಈ ಶಾಲೆ ಆರಂಭವಾಗಿದ್ದು, ದಾನಿಗಳ ನೆರವಿನಿಂದ ಶಿಕ್ಷಣ ಪ್ರೇಮಿಗಳ ಪ್ರಯತ್ನದಿಂದ ಗ್ರಾಮೀಣ ವಿದ್ಯಾರ್ಥಿಗಳ ಬೆಳವಣಿಗೆಗೆ ನೆರವಾಗಿದೆ ಎಂದರು.
ಸಮಿತಿಯ ಗೌರವಾಧ್ಯಕ್ಷ ಶಾಂತಾರಾಮ ನಾಯಕ ಹಿಚ್ಕಡ
ವೇದಿಕೆಯಲ್ಲಿದ್ದರು.
ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿನಿ ಅಸ್ಮೀತಾ ನೀಲಕಂಠ ಗುಣಗಾರನ್ನು ಸನ್ಮಾನಿಸಲಾಯಿತು. ಮುಖ್ಯಾಧ್ಯಾಪಕ ಎನ್ ವಿ ರಾಥೋಡ್ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಣ ಸಂಸ್ಥೆಗೆ ದೇಣಿಗೆ ನೀಡಿದ ದಾನಿಗಳ ಯಾದಿಯನ್ನು ಗಣಿತ ಶಿಕ್ಷಕರಾದ ಶಾಂತಲಾ ಮಹೇಶ ನಾಯಕ ಪ್ರಸ್ತುತ ಪಡಿಸಿದರು. ಶಿಕ್ಷಕಿ ಅನುಪಮಾ ನಾಯಕ ವಂದಿಸಿದರು.