ಸಂಭವನೀಯ ಗುಡ್ಡಕುಸಿತ ಪ್ರದೇಶ ಅಪ್ಸರಕೊಂಡಕ್ಕೆ ಉಸ್ತುವಾರಿ ಪೂಜಾರಿ ಭೇಟಿ

ಹೊನ್ನಾವರ: ತಾಲೂಕಿನ ಅಪ್ಸರಕೊಂಡದಲ್ಲಿನ ಸಂಭವನೀಯ ಗುಡ್ಡಕುಸಿತ ಸ್ಥಳಕ್ಕೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.

ಈ ಭಾಗದಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಸುಮಾರು 50 ಕುಟುಂಬಗಳನ್ನು ಕಾಳಜಿಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಮಳೆಗಾಲದ ಸಂದರ್ಭದಲ್ಲಿ ಗುಡ್ಡವನ್ನು ತೆರುವುಗೊಳಿಸುವುದು ಇನ್ನೊಂದು ಅಪಾಯಕ್ಕೆ ದಾರಿಮಾಡಿಕೊಡುವ ಸಾಧ್ಯತೆ ಇದೆ. ಈಗ ಕಣ್ಣಳತೆಯಲ್ಲಿ ಕಾಮಗಾರಿ ನಡೆಸುವುದು ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇರುವುದರಿಂದ ಗುಡ್ಡ ತೆರುವಿನಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದು ಸರ್ವೆ ನಡೆಸುವಂತೆ ಅಧಿಕಾರಿಗಳಿಗೆ ಸಚಿವರು ಆದೇಶಿಸಿದರು. ನಂತರ ಕಾಳಜಿ ಕೇಂದ್ರದಲ್ಲಿರುವ ನಿವಾಸಿಗಳನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದರು. ಪ್ರತಿ ಬಾರಿ ಮಳೆಗಾಲ ಬಂತೆಂದರೆ ಇದೆ ಸಮಸ್ಯೆ ಎದುರಾಗುತ್ತದೆ.ಶಾಶ್ವತ ಪರಿಹಾರ ನೀಡಿ ಎಂದು ನಿವಾಸಿಗಳು ಸಚಿವರಲ್ಲಿ ಬೇಡಿಕೆಯಿಟ್ಟರು.

ಈ ಸಂದರ್ಭದಲ್ಲಿ ಶಾಸಕ ಸುನೀಲ್ ನಾಯ್ಕ, ಸಹಾಯಕ ಆಯುಕ್ತರಾದ ಮಮತಾದೇವಿ ಜಿ.ಎಸ್, ತಹಶೀಲ್ದಾರ ನಾಗರಾಜ್ ನಾಯ್ಕಡ್, ತಾ. ಪಂ. ಕಾರ್ಯನಿರ್ವಾಹಣಾಧಿಕಾರಿ ಸುರೇಶ ನಾಯ್ಕ, ಅರಣ್ಯ ಇಲಾಖೆಯ ಅಧಿಕಾರಿಗಳು, ಗಣಿ ಇಲಾಖೆಯ ಅಧಿಕಾರಿಗಳು, ಗ್ರಾ. ಪಂ. ಸದಸ್ಯರು, ಸ್ಥಳೀಯ ಜನಪ್ರತಿನಿದಿಗಳು, ಕಾರ್ಯಕರ್ತರು ಇದ್ದರು.