ಚಿಗುರು ಚಿವುಟಿದ ಕಾಡುಕೋಣ.! ಅನ್ನದಾತನ ಬದುಕು ಹೈರಾಣ.!

ಸಿದ್ದಾಪುರ: ಒಂದು ಕಡೆ ಭಾರಿ ಮಳೆಯಿಂದಾಗಿ ಬೆಳೆಗಳು ನೆಲಕಚ್ಚಿವೆ. ಇದರ ನಡುವೆ ಭತ್ತದ ಗದ್ದೆಗೆ ಕಾಡುಕೋಣಗಳ ಹಿಂಡು ನುಗ್ಗಿ ಲೂಟಿ ಮಾಡುತ್ತಿದ್ದು, ತಾಲೂಕಿನ ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ. ತಾಲೂಕಿನಾದ್ಯಂತ ನಾಟಿ ಕಾರ್ಯ ಮುಕ್ತಾಯಗೊಂಡಿದ್ದು, ನೆಟ್ಟ ಸಸಿಗಳನ್ನು ಕಾಡುಕೋಣಗಳ ಗುಂಪು ಹಾಳು ಮಾಡಿ ಹೋಗುತ್ತಿವೆ. ರಾತ್ರಿ ವೇಳೆ ಹಿಂಡಾಗಿ ಬರುವ ಕಾಡುಕೋಣಗಳ ಗುಂಪು ನೆಟ್ಟ ಗದ್ದೆ ತುಳಿದು ಸಂಪೂರ್ಣ ನಾಶ ಮಾಡುತ್ತಿವೆ. ತ್ಯಾರ್ಸಿ ಸಮೀಪದ ಕರಡಿಮಳ, ದಳೆಬೈಲ್ ಹಾಗೂ ಸುತ್ತಮುತ್ತಲಿನ ರೈತರ ಜಮೀನಿಗೆ ನುಗ್ಗುವ ಕಾಡುಕೋಣಗಳು ವರ್ಷದ ಕೂಳಿಗೆ ಬರೆ ಎಳೆಯುತ್ತಿವೆ.

ತಂತಿ ಬೇಲಿಗೂ ಜಗ್ಗಲ್ಲ.!

ತಾಲೂಕಿನ ರೈತರು ತಮ್ಮ ಭತ್ತದ ಬೆಳೆಯನ್ನು ದನಕರುಗಳು ಹಾಳು ಮಾಡದಂತೆ ಜಮೀನಿನ ಸುತ್ತಲು ಬೇಲಿ ಹಾಕಿ ಭದ್ರ ಮಾಡಿಕೊಂಡರೂ ಬೆಳೆ ಉಳಿಸಿಕೊಳ್ಳಲಾಗುತ್ತಿಲ್ಲ. ಕಲ್ಲು ಕಂಬದೊಂದಿಗೆ ಬಹುತೇಕರು ತಂತಿ ಬೇಲಿ ಮಾಡಿದರು ಕಾಡೆಮ್ಮೆ ಮತ್ತು ಕಾಡುಕೋಣಗಳ ಗುಂಪು ಅದಕ್ಕೆ ಜಗ್ಗದೆ ರಾತ್ರಿ ವೇಳೆ ಹೊಕ್ಕು ಬೆಳೆಯನ್ನೆಲ್ಲಾ ಹಾಳು ಮಾಡುತ್ತಿವೆ. ಐಬೆಕ್ಸ್ ಬೇಲಿ ಹಾಕಿದರೂ ಸಹ ಒಳನುಗ್ಗಿ ಭತ್ತದ ಸಸಿಗಳನ್ನು ನಾಶಪಡಿಸಿ ಕೃಷಿಕರ ನೆಮ್ಮದಿ ಹಾಳು ಮಾಡುತ್ತಿವೆ. ಈಗಾಗಲೇ ಮಂಗಗಳ ಕಾಟದಿಂದ ಬೇಸತ್ತ ರೈತರಿಗೆ ಕಾಡುಕೋಣಗಳು ಬೆಳೆ ಹಾಳು ಮಾಡುತ್ತಿರುವುದು ಚಿಂತಾಕ್ರಾಂತರನ್ನಾಗಿಸಿದೆ.

ರೈತರು ಕಂಗಾಲು

ಕೂಲಿಯಾಳು ಸಿಗದೇ ದುಪ್ಪಟ್ಟು ಸಂಬಳ ನೀಡಿ ಭತ್ತದ ನಾಟಿ ಮಾಡಿ ಮುಗಿಯುತ್ತಿದ್ದಂತೆ ಕಾಡುಕೋಣಗಳು ಗದ್ದೆಯನ್ನೆಲ್ಲಾ ತುಳಿದು ಬೇರೂರದ ಸಸಿಗಳನ್ನು ಕಿತ್ತು ಹಾಕಿವೆ. ಇದರಿಂದ ವರ್ಷದ ಊಟಕ್ಕೆ ಪರದಾಡುವ ಸ್ಥಿತಿ ಎದುರಾಗಿದೆ. ಸಿಗುವ ಅಲ್ಪಸ್ವಲ್ಪ ಬೆಳೆಯನ್ನು ಪ್ರಾಣಿಗಳು ಹಾಳು ಮಾಡಿ ಹೋಗುತ್ತಿರುವುದು ದಿಕ್ಕು ತೋಚದಂತಾಗಿದೆ. ನಿದ್ರೆ ಬಿಟ್ಟು ಪ್ರಾಣಿಗಳನ್ನು ಕಾಯುವುದೇ ಕೆಲಸವಾಗಿದ್ದು, ರೈತರ ಸಮಸ್ಯೆ ಕೇಳುವವರೇ ಇಲ್ಲ ಎನ್ನುತ್ತಾರೆ ಗಂಗಾಧರ ನಾಯ್ಕ.