ಇಂತಹ ಸಂಸದರು ಏಕೆ ಬೇಕು? ಅನಂತಕುಮಾರ್ ಹೆಗಡೆ ವಿರುದ್ಧ ಜಿಲ್ಲಾ ಕಾಂಗ್ರೆಸ್ ವಾಗ್ದಾಳಿ

ಅಂಕೋಲಾ: 30 ವರ್ಷಗಳಿಂದ ಸಂಸದರಾಗಿರುವ ಅನಂತಕುಮಾರ ಹೆಗಡೆ ರಾಜ್ಯದ ಮುಖ್ಯಮಂತ್ರಿಗಳಿಗೆ ಏಕವಚನದಲ್ಲಿ ಅಸಂವಿಧಾನಿಕ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ. ಈ ರೀತಿ ಅಸಂಬದ್ಧವಾಗಿ ಮಾತನಾಡುವ ಬದಲು ಸಂಸದರಾಗಿ ಏನೇನು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎನ್ನುವುದನ್ನು ತಿಳಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ ಹೇಳಿದರು.
ಪಟ್ಟಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದರಾಗಿ ಅನಂತಕುಮಾರ ಹೆಗಡೆಯವರ ಕಾರ್ಯ ಶೂನ್ಯ. ಜಿಲ್ಲೆಯ ಯಾವೊಂದು ಅಭಿವೃದ್ಧಿ ಕೆಲಸಗಳಿಗೂ ಅವರು ಸ್ಪಂದಿಸಿಲ್ಲ. ಮಳೆಗಾಲ ಪ್ರಾರಂಭವಾದರೆ ಗುಡುಗುಸಿಡಿಲುಗಳು ಸಾಮಾನ್ಯ ಹಾಗೆಯೇ ಚುನಾವಣೆಯ ಸಂದರ್ಭದಲ್ಲಿ ಗುಡುಗುಗಳಂತೆ ಅನಂತಕುಮಾರ ಹೆಗಡೆ ಮಾತನಾಡುತ್ತಾರೆ. ಜನರ ಮಧ್ಯೆ ದ್ವೇಷದ ಬೀಜಗಳನ್ನು ಬಿತ್ತಲು ಅವರು ಕಾರಣರಾಗುತ್ತಾರೆ. ಮುಂದಿನ ಬಾರಿ ಬಿಜೆಪಿಯಿಂದ ಅವರಿಗೆ ಟಿಕೆಟ್ ದೊರೆತರೂ ಅವರು ಗೆಲ್ಲುವುದಿಲ್ಲ. ಯಾಕೆಂದರೆ ಪದೇಪದೇ ಸುಳ್ಳನ್ನು ಹೇಳಿ ಜನರನ್ನು ನಂಬಿಸಲುವಾಗುವುದಿಲ್ಲ. ಈ ಬಾರಿ ಜನರಿಗೆ ಅರ್ಥವಾಗಿದೆ. ದೇಶದಲ್ಲಿ 11ಕ್ಕೂ ಅಧಿಕ ಧರ್ಮಗಳು 6,000ಕ್ಕೂ ಅಧಿಕ ಜಾತಿಗಳು ಇದ್ದು ವಿವಿಧತೆಯಲ್ಲಿ ಏಕತೆಯನ್ನು ತತ್ವದ ಅಡಿಯಲ್ಲಿ ಎಲ್ಲರೂ ಒಂದುಗೂಡಿ ಬಾಳುತ್ತಿದ್ದಾರೆ. ಆದರೆ ಸಂಸದರು ಕೋಮು ಸೌಹಾರ್ದ ಕದಡುವ ರೀತಿಯಲ್ಲಿ ಮಾತನಾಡುತ್ತಾರೆ. ಮುಖ್ಯಮಂತ್ರಿಗಳಿಗೆ ಏಕವಚನದಲ್ಲಿ ಮಾತನಾಡುವ ಮೂಲಕ ಸುಸಂಸ್ಕೃತ, ಸುಶಿಕ್ಷಿತ ಸಂಸದರು ಇಡೀ ರಾಜ್ಯದ ಮುಂದೆ ತಪ್ಪು ಸಂದೇಶವನ್ನು ನೀಡಿದ್ದಾರೆ. ಇದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಮಾತ್ರ ಸಂಸದ ಅನಂತಕುಮಾರ ಹೆಗಡೆ ತಮ್ಮ ಬೇಳೆ ಬೇಯಿಸಿಕೊಳ್ಳುವ ಮಾತುಗಳನ್ನ ಆಡುತ್ತಾರೆ. ಈ ಹಿಂದೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದರು. ಅದು ವ್ಯರ್ಥ ಹೇಳಿಕೆಯಾಗಿಯೆ ಉಳಿಯಿತು. ಜಾತಿ ಧರ್ಮದ ಒಡಕು ಮೂಡಿಸಿ ಮತ ಗಳಿಕೆಯ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ. 30 ವರ್ಷಗಳಿಂದ ಸಂಸದರ ನಿಧಿಯನ್ನು ಯಾವ ಯಾವ ತಾಲೂಕುಗಳ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದಾರೆ ಎನ್ನುವ ಬಗ್ಗೆ ಅವರು ಸ್ಪಷ್ಟ ಪಡಿಸಲಿ ಎಂದರು.
ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಗಾಂವಕರ ಮಾತನಾಡಿ, ಪ್ರಣಾಳಿಕೆಯಲ್ಲಿ ಕೊಡುವ ಭರವಸೆಗಳನ್ನು ಈಡೇರಿಸುವ ಮೂಲಕ ದೇಶದಲ್ಲೇ ನುಡಿದಂತೆ ನಡೆಯುವ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯನವರು ಹೆಸರುಗಳಿಸಿಕೊಂಡಿದ್ದಾರೆ. ಅವರಿಗೆ ಹೇಳುವ ಸ್ಥಿತಿಯಲ್ಲಿ ಅನಂತಕುಮಾರ ಹೆಗಡೆ ಇಲ್ಲ. ಹೆಗಡೆಯವರು ತಮ್ಮ ಹೇಳಿಕೆಯನ್ನು ತಾವು ಮನದಟ್ಟು ಮಾಡಿಕೊಂಡು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಅನಿವಾರ್ಯ ಎಂದರು.
ಅಲ್ಪಸಂಖ್ಯಾತ ಘಟಕದ ಪ್ರಮುಖ ವಿಜಯ್ ಪಿಳ್ಳೈ ಮಾತನಾಡಿದರು. ಕಾಂಗ್ರೆಸ್ ಪ್ರಮುಖರಾದ ವಿನೋದ ನಾಯಕ, ಕೆ ಎಸ್ ಗೌಡ, ಎನ್.ಬಿ. ನಾಯಕ, ಸುರೇಶ್ ಅಸ್ಲಗದ್ದೆ, ಏಕನಾಥ ನಾಯ್ಕ, ಶಾಂತಿ ಆಗೇರ, ಮಂಜುನಾಥ್ ನಾಯ್ಕ್, ಸಂತೋಷ್ ನಾಯ್ಕ, ರಾಜೇಶ್ ನಾಯ್ಕ, ಉದಯ ನಾಯಕ, ಪುರಸಭಾ ಸದಸ್ಯ ಮಂಜುನಾಥ ನಾಯ್ಕ ಇದ್ದರು.