ಕಾಂಗ್ರೆಸ್ಸಿನವರು ಶ್ರೀರಾಮನ ವಿರೋಧಿಗಳಲ್ಲ – ವೆಂಕಟೇಶ ನಾಯ್ಕ


ಭಟ್ಕಳ : ಕಾಂಗ್ರೆಸ್ಸಿನವರು ಶ್ರೀರಾಮನ ವಿರೋಧಿಗಳಲ್ಲ. ಆದರೆ ಬಿಜೆಪಿಯವರು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ ಮಾತನ್ನು ತಿರುಚಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.

ಅವರು ಶನಿವಾರ ಮಧ್ಯಾಹ್ನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಿಧಾಸಭಾ ಚುನಾವಣೆಯಲ್ಲಿ ಸೋತಿರುವ ಬಿಜೆಪಿಯವರು ಇಲ್ಲಸಲ್ಲದ್ದನ್ನು ಹೇಳಿ ಜನರಿಗೆ ಮಂಗ ಮಾಡಲು ಹೊರಟಿದ್ದಾರೆ. ಹಿಂದೂ ಹಿಂದೂಗಳಲ್ಲೇ ಒಡೆದು ಆಳುವ ನೀತಿಯನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿಯ ಆಟ ನಡೆಯುವುದಿಲ್ಲ. ಲೋಕಸಭೆ ಚುನಾವಣೆ ಹತ್ತಿರದಲ್ಲಿರುವುದರಿಂದ ಬಿಜೆಪಿ ಇಲ್ಲಸಲ್ಲದ ಆರೋಪ ಮಾಡಿ ರಾಜಕೀಯ ಲಾಭ ಪಡೆಯಲು ಹೊರಟಿದೆ. ಸಚಿವರು ರಾಮಮಂದಿರ ಪ್ರತಿಷ್ಠಾಪನೆ ಆಗುವ ಪೂರ್ವದಲ್ಲೇ ಮಂತ್ರಾಕ್ಷತೆ ನೀಡುವುದು ಬಗ್ಗೆ ಮಾತನಾಡಿದ್ದಾರೆ. ಸಚಿವರ ಹೇಳಿದ ಮಾತಿನಲ್ಲಿ ತಪ್ಪೇನಿದೆ ಎಂದ ಅವರು ನಮ್ಮಲ್ಲಿ ಪೂಜೆ ಆಗುವ ಮೊದಲು ಎಲ್ಲಿಯೂ ಮಂತ್ರಾಕ್ಷತೆ ಕೊಡುವುದಿಲ್ಲ. ಸಚಿವರು ಮಾತನ್ನು ಬಿಜೆಪಿ ತಿರುಚಿ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಎಲ್ಲಾ ಜಾತಿ, ಜನಾಂಗ, ಧರ್ಮವನ್ನು ಸರಿಸಮಾನಾಗಿ ಕಾಣುವ ಪಕ್ಷವಾಗಿದೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದ್ಲಲ್ಲಿ ಯಾವುದೇ ಧಾರ್ಮಿಕ ಕೇಂದ್ರಗಳನ್ನು ಕೆಡವಲಿಲ್ಲ. ಮಂಕಾಳ ವೈದ್ಯರು ಶಾಸಕರಿದ್ದ ಸಂದರ್ಭದಲ್ಲಿ ದೇವಸ್ಥಾನ, ಮಸೀದಿ, ಚರ್ಚಿನ ಅಭಿವೃದ್ಧಿಗೆ ಯಾವುದೇ ಬೇಧಭಾವ ಮಾಡದೇ ಅನುದಾನ ತಂದಿದ್ದಾರೆ. ಮಂಕಾಳ ವೈದ್ಯರು ಧಾರ್ಮಿಕ ಕೇಂದ್ರಗಳಿಗೆ ಕೊಟ್ಟ ಕೊಡುಗೆ ಬಗ್ಗೆ ಯಾವುದೇ ವೇದಿಕೆಯಲ್ಲೂ ಚರ್ಚಿಸಲು ಸಿದ್ಧ ಎಂದ ಅವರು ಚುನಾವಣೆ ಹತ್ತಿರ ಬಂದಾಗ ಬಿಜೆಪಿಯವರು ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಮಮಂದಿರ ಇನ್ನೂ ಪೂರ್ಣಗೊಂಡಿಲ್ಲ. ಇದೇ ಕಾರಣಕ್ಕೆ ಶಂಕರಾಚಾರ್ಯ ಪೀಠದ ನಾಲ್ವರು ಸ್ವಾಮೀಜಿಯವರು, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖರು ರಾಮಮಂದಿರ ಉದ್ಘಾಟನೆಗೆ ಹೋಗುತ್ತಿಲ್ಲ. ಬಿಜೆಪಿ ಚುನಾವಣೆಗೋಸ್ಕರ ರಾಮಮಂದಿರ ವಿಚಾರವನ್ನು ಬಳಸಿಕೊಳ್ಳುವುದು ಸರಿಯಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಮಾ ಮೊಗೇರ ಮಾತನಾಡಿ, ಬಿಜೆಪಿ ಅಧ್ಯಕ್ಷರು ತಿಳುವಳಿಕೆ ಕಡಿಮೆಯಿಂದ ಸಚಿವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಎಲ್ಲರೂ ರಾಮ ಭಕ್ತರೇ ಆಗಿದ್ದಾರೆ. ನಮ್ಮಲ್ಲಿ ಅಕ್ಷತೆ ಕೊಟ್ಟು ಕರೆಯುವ ಪದ್ದತಿ ಇದೆ, ಆದರೆ ಮಂತ್ರಾಕ್ಷತೆ ಕೊಟ್ಟು ಕರೆಯುವ ಪದ್ದತಿ ಇಲ್ಲ. ಮಂತ್ರಾಕ್ಷತೆಯನ್ನು ಪೂಜೆ ಆದ ಬಳಿಕ ಮಾತ್ರ ಕೊಡಲಾಗುತ್ತದೆ ಎಂದ ಅವರು ಅನಂತಕುಮಾರ ಹೆಗಡೆ ಚುನಾವಣೆ ಹತ್ತಿರ ಬರುತ್ತಿರುವಾಗ ಮತ್ತೆ ಚಾಲ್ತಿಗೆ ಬಂದು ಮಾತನಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಎಂ ಪಿ ಅನುದಾನದಿಂದ ಎಷ್ಟು ಕೆಲಸ ಆಗಿದೆ. ಎಷ್ಟು ಸದ್ಭಳಕೆ ಮಾಡಿದ್ದೀರಿ. ಎಷ್ಟು ಹಣ ವಾಪಾಸ್ ಹೋಗಿದೆ ಎನ್ನುವುದರ ಬಗ್ಗೆ ಬಿಜೆಪಿಯವರು ಲೆಕ್ಕ ಕೊಡಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ನಾರಾಯಣ ನಾಯ್ಕ, ಮಾಸ್ತಿ ಗೊಂ, ಜಗದೀಶ ಗೊಂಡ , ರೇವತಿ ನಾಯ್ಕ, ಮೀನಾಕ್ಷಿ ನಾಯ್ಕ ಮುಂತಾದವರಿದ್ದರು.