ಅಂಕೋಲಾ: ಭಾರತವು ವಸಾಹತುಶಾಹಿಯ ದಬ್ಬಾಳಿಕೆಗೆ ಒಳಗಾಗಿದ್ದ ಸಂದರ್ಭದಲ್ಲಿ, ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು, ವೇದಾಂತದ ದಾರ್ಶನಿಕ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಸ್ವಾಮಿ ವಿವೇಕಾನಂದರು ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಬೆಳಗಿಸಿದರು. ಇದರಿಂದಾಗಿ ದೇಶದ ವಿಮೋಚನೆಗೆ ವೇದಿಕೆ ನಿರ್ಮಿಸಿದರು ಎಂದು ಪ್ರಾಚಾರ್ಯ ಡಾ. ಎಸ್. ವಿ. ವಸ್ತ್ರದ್ ಅಭಿಪ್ರಾಯಪಟ್ಟರು.
ಪಟ್ಟಣದ ಗೋಖಲೆ ಸೆಂಟೇನರಿ ಕಾಲೇಜಿನಲ್ಲಿ ಶುಕ್ರವಾರ ದಿನಕರ ವೇದಿಕೆ ಉತ್ತರ ಕನ್ನಡ, ಕಾಲೇಜಿನ ಎನ್ಎಸ್ಎಸ್ ಘಟಕ ಮತ್ತು ರೆಡ್ ಕ್ರಾಸ್ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಯುವ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೆನರಾ ವೆಲ್ಫೇರ್ ಟ್ರಸ್ಟ್ ನ ಟ್ರಸ್ಟಿ ಡಾ.ಕೃಷ್ಣ ಪ್ರಭು, ಯುವ ಜನಾಂಗಕ್ಕೆ ವಿವೇಕಾನಂದರು ಸ್ಪೂರ್ತಿಯ ಚಿಲುಮೆಯಾಗಿದ್ದಾರೆ ಎಂದರು. ಸಾಹಿತಿ ಮೋಹನ ಹಬ್ಬು ದಿನಕರ ವೇದಿಕೆಯ ಧ್ಯೇಯ ಗೀತೆಯನ್ನು ಹಾಡಿದರು. ಪ್ರತೀಕ್ಷಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಯುವ ಪ್ರತಿಭೆಗಳಾದ ಸುಮಂತ ನಾಯ್ಕ ಮತ್ತು ಚಂದ್ರಿಕಾ ಎಸ್. ಗೌಡ ಅವರನ್ನು ಸನ್ಮಾನಿಸಲಾಯಿತು. ದಿನಕರ ವೇದಿಕೆ ಅಧ್ಯಕ್ಷ ರವೀಂದ್ರ ಕೇಣಿ ಅಧ್ಯಕ್ಷತೆ ವಹಿಸಿದ್ದರು.
ಸೃಷ್ಠಿ ನಾಯಕ ನಿರೂಪಿಸಿದರು, ಪ್ರತೀಕ ನಾಯ್ಕ ಸಹಕರಿಸಿದರು. ಎಂ.ಎಂ. ಕರ್ಕಿಕರ, ವಸಂತ ನಾಯ್ಕ, ರಪೀಕ ಶೇಖ, ಕೆ.ಎಸ್. ಬೋರಕರ, ಆರ್. ಪಿ. ಭಟ್ ಉಪಸ್ಥಿತರಿದ್ದರು. ಸಂತೋಷ ನಾಯಕ ವಂದಿಸಿದರು.