ಉಳವಿಯಲ್ಲಿ ಶ್ರೀ.ಚೆನ್ನಬಸವೇಶ್ವರ ಸಭಾಭವನದಲ್ಲಿ ಜಾತ್ರಾ ಪೂರ್ವಭಾವಿ ಸಭೆ

ಜೋಯಿಡಾ : ತಾಲೂಕಿನ ಹಾಗೂ ಉತ್ತರ ಕರ್ನಾಟಕದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಉಳವಿ ಚೆನ್ನಬಸವಣ್ಣನ ಜಾತ್ರೆ ಫೆ 16 ರಿಂದ ಪ್ರಾರಂಭವಾಗುವ ನಿಟ್ಟಿನಲ್ಲಿ ಸಹಾಯಕ ಆಯುಕ್ತರಾದ ಕನಿಷ್ಕ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕನಿಷ್ಕ ಶರ್ಮಾ ಅವರು ನಾನು ಮೂಲತಃ ಜಾರ್ಖಂಡ್ ಮೂಲದವನಾಗಿದ್ದು, ಸಧ್ಯ ಉತ್ತರಕನ್ನಡ ಜಿಲ್ಲೆಗೆ ಎ.ಸಿ ಯಾಗಿ ಬಂದಿದ್ದೇನೆ, ಬಂದ ಕೂಡಲೇ ಉಳವಿಯಂತಹ ಪುಣ್ಯ ಸ್ಥಳಕ್ಕೆ ಭೇಟಿ ನೀಡಿದ್ದು ನನ್ನ ಭಾಗ್ಯ. ಎಲ್ಲರೂ ಸೇರಿ ಜಾತ್ರೆಯನ್ನು ಅಚ್ಚುಕಟ್ಟಾಗಿ ಹಾಗೂ ಶ್ರದ್ಧಾ ಭಕ್ತಿಯಿಂದ ನಡೆಸೋಣ ಎಂದರು.

ಸಭೆಯ ಆರಂಭದಲ್ಲಿ ಉತ್ತರಕರ್ನಾಟಕ ಭಾಗದ ರೈತ ರಾಜು ಅವರು ಗುಂದ – ಉಳವಿ ಪೋಟೋಲಿ ರಸ್ತೆ ಪ್ಯಾಚ್ ವರ್ಕ್ ಸಂಪೂರ್ಣ ಕಳಪೆಯಾಗಿದೆ. ರಸ್ತೆಯಲ್ಲಿ ವಾಹನಗಳು ಓಡಾಡಲು ಸಮಸ್ಯೆ ಉಂಟಾಗುತ್ತಿದೆ. ಬಹಳ ವರ್ಷಗಳಿಂದ ರಸ್ತೆ ಹಾಳಾಗಿಯೇ ಇದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ರಸ್ತೆ ಸರಿಪಡಿಸಬೇಕೆಂದು ಆಗ್ರಹಿಸಿದರು.

ಉಳವಿ ಗ್ರಾ.ಪಂ‌ ಅಧ್ಯಕ್ಷ ಮಂಜುನಾಥ ಮೊಕಾಶಿ ಮಾತನಾಡಿ ಜಾತ್ರೆಗೆ ಬಂದ ಜನರು ಪ್ರವಾಸಿ ತಾಣವಾದ ತೂಗು ಸೇತುವೆ ಮೇಲೆ ನೂರಕ್ಕಿಂತ ಹೆಚ್ಚಿನ ಜನರು ಒಮ್ಮೆಲೆ ಹೋಗುವುದರಿಂದ ಸೇತುವೆ ಹಾಳಾಗುವ ಸಾಧ್ಯತೆ ಇದೆ. ಅಲ್ಲದೆ ಅನಾಹುತ ಸಂಭವಿಸಬಹುದು . ತೂಗು ಸೇತುವೆಯ ಸುರಕ್ಷತೆಯ ದೃಷ್ಟಿಯಿಂದ ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆ ಸಿಬ್ಬಂದಿಗಳು ಅಲ್ಲಿ ಬಂದೋಬಸ್ತ ಮಾಡಬೇಕು. ಜಾತ್ರೆಗೆ ಬಂದ ಜನರಿಗೂ ಕುಡಿಯುವ ನೀರಿನ ವ್ಯವಸ್ಥೆ ನಮ್ಮ ಗ್ರಾ.ಪಂ ವತಿಯಿಂದ ಮಾಡುತ್ತೇವೆ ಎಂದರು‌.

ಡಿವೈಎಸ್ಪಿ ಶಿವಾನಂದ ಕಟಗಿ ಮಾತನಾಡಿ ಜಾತ್ರೆಗೆ ಬರುವ ಭಕ್ತರು ದಯವಿಟ್ಟು ಸರಾಯಿ ಕುಡಿದು ವಾಹನ ಚಲಾಯಿಸಬೇಡಿ. ವಾಹನಗಳಲ್ಲಿ ಸರಾಯಿ ತಂದಲ್ಲಿ ಅಂಥವರ ವಾಹನ‌ ಸೀಜ್ ಮಾಡಲಾಗುತ್ತದೆ. ಅನಧಿಕೃತವಾಗಿ ಮಧ್ಯ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು. ಜಾತ್ರೆಯಲ್ಲಿ ಜನರು ಜಗಳ, ತಂಟೆ ತಕರಾರು ಮಾಡದೆ ಉತ್ತಮವಾಗಿ ಜಾತ್ರೆ ನಡೆಸೋಣ ಎಂದರು.

ಇನ್ನೂಳಿದಂತೆ ಜಾತ್ರೆಗೆ ಬರುವ ಎತ್ತುಗಳಿಗೆ ನೀರು ಮತ್ತು ಔಷಧಗಳು, ಕೊರೋನಾ ಗುಣಲಕ್ಷಣಗಳು ಇದ್ದರೆ ಅಂಥವರು ಜಾತ್ರೆಗೆ ಬರದಂತೆ ಸೂಚಿಸಲಾಯಿತು. ಜಾತ್ರೆಯಲ್ಲಿ ಪ್ಲಾಸ್ಟಿಕ್ ಉಪಯೋಗ ಮಾಡದಂತೆ, ಸ್ವಚ್ಚತೆ ಕಾಪಾಡುವಂತೆ, ಜಾತ್ರೆಗೆ ಬಂದ ವಾಹಗಳಿಗೆ ಜಾಗ ಮಾಡಿಕೊಡುವಂತೆ, ದಾರಿಯುದ್ದಕ್ಕೂ ಭಕ್ತರಿಗೆ ನೀರಿನ ವ್ಯವಸ್ಥೆ ಮಾಡುವಂತೆ, ಬಂದ ಭಕ್ತರಿಗೆ ವಿದ್ಯುತ್ ವ್ಯವಸ್ಥೆ, ಉತ್ತಮ ಗುಣಮಟ್ಟದ ಹಾಗೂ ಹೆಚ್ಚಿನ ಸಾರಿಗೆ ಬಸ್ ಬಿಡುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಉಳವಿ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಸಂಜಯ ಕಿತ್ತೂರ, ಜೋಯಿಡಾ ತಹಶೀಲ್ದಾರ್ ಮಂಜುನಾಥ ಮೊನ್ನೋಳಿ, ‌ಸಿ.ಪಿ.ಐ ನಿತ್ಯಾನಂದ ಪಂಡಿತ್, ಉಳವಿ ಟ್ರಸ್ಟ್ ಕಮಿಟಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.