ದಾಂಡೇಲಿ : ನಗರದ ರೋಟರಿ ಶಾಲೆಯ ಸಭಾಭವನದಲ್ಲಿ ಅಂತರಾಷ್ಟ್ರೀಯ ಇನ್ನರ್ ವೀಲ್ ಕ್ಲಬ್ಬಿನ 100ನೇ ವರ್ಷದ ಶತಕ ಸಂಭ್ರಮ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಸೆಲ್ವಿ ಅವರು ಇನ್ನರ್ ವಿಲ್ ಕ್ಲಬಿನ 100ನೇ ವರ್ಷದ ಸಂಭ್ರಮೋತ್ಸವದಲ್ಲಿ ಭಾಗಿಯಾಗಲು ಹರ್ಷವೆನಿಸುತ್ತದೆ. ಮಹಿಳೆಯರೇ ಸಂಘಟಿತರಾಗಿ ಇನ್ನರ್ ವೀಲ್ ಕ್ಲಬ್ ಮೂಲಕ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿರುವುದು ಶ್ಲಾಘನೀಯವಾಗಿದೆ. ಪೊಲೀಯೋ ನಿರ್ಮೂಲನೆಯಲ್ಲಿ ಇನ್ನರ್ ವೀಲ್ ಕ್ಲಬಿನ ಪಾತ್ರ ಸ್ಮರಣೀಯವಾಗಿದೆ. ದಾಂಡೇಲಿಯ ಇನ್ನರ್ ವೀಲ್ ಕ್ಲಬ್ ರೇಷ್ಮಾ ಬಾವಾಜಿಯವರ ನೇತೃತ್ವದಲ್ಲಿ ಜನಪಯೋಗಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜನಮುಖಿ ಸಂಘಟನೆಯಾಗಿ ಜನಪ್ರೀತಿಗೆ ಪಾತ್ರವಾಗಿದೆ ಎಂದರು.
ಇನ್ನರ್ ವೀಲ್ ಕ್ಲಬ್ಬಿನ ನಿಕಟ ಪೂರ್ವ ಜಿಲ್ಲಾಧ್ಯಕ್ಷೆ ಡಾ.ಜ್ಯೋತಿ ಪಾಟೀಲ್ ಅವರು ಮಾತನಾಡುತ್ತಾ, ಅಂತರಾಷ್ಟ್ರೀಯ ಇನ್ನರ್ ವೀಲ್ ಕ್ಲಬ್ ಶತಮಾನೋತ್ಸವದ ಸಂಭ್ರಮದಲ್ಲಿದ್ದರೇ, ಜಿಲ್ಲಾ ಇನ್ನರ್ ವೀಲ್ ಕ್ಲಬ್ 50ನೇ ವರ್ಷದ ಸುವರ್ಣ ಸಂಭ್ರಮದಲ್ಲಿದೆ. ಇನ್ನರ್ ವೀಲ್ ಕ್ಲಬಿನಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಉಪಯುಕ್ತ ಕೊಡುಗೆಗಳನ್ನು ನೀಡಲು ಸಾಧ್ಯ ಎಂದರು. ರೇಷ್ಮಾ ಬಾವಾಜಿ ಅವರ ನೇತೃತ್ವದಲ್ಲಿ ಇನ್ನರ್ ವೀಲ್ ಕ್ಲಬ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ನಿವೃತ್ತ ನರ್ಸ್ ಅಧೀಕ್ಷಕಿ ಹಾಗೂ ರೋಟರಿ ಕ್ಲಬಿನ ಹಿರಿಯ ಸದಸ್ಯೆ ಪ್ರೇಮಾ ಬಾವಾಜಿಯವರು ಮಾತನಾಡಿ ನಾನು ಆರೋಗ್ಯ ಇಲಾಖೆಯಲ್ಲಿ ಇದ್ದುಕೊಂಡೇ ಇನ್ನರ್ ವೀಲ್ ಕ್ಲಬ್ಬಿನಲ್ಲಿ ಪ್ರೀತಿ, ಅಭಿಮಾನದಿಂದ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವ ನಿಟ್ಟಿನಲ್ಲಿ ಇನ್ನರ್ ವೀಲ್ ಕ್ಲಬ್ ಶ್ರಮಿಸುತ್ತಿದೆ ಎಂದರು. ಇನ್ನರ್ ವೀಲ್ ಕ್ಲಬ್ಬಿನ ಈ ಸಂಭ್ರಮದಲ್ಲಿ 50 ದಾದಿಯರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಅಭಿಮಾನದ ಕಾರ್ಯ ಎಂದರು. ರೋಗಿಯನ್ನು ಮಾತೃವಾತ್ಸಲ್ಯದಿಂದ ಆರೈಕೆ ಮಾಡುವ ಮೂಲಕ ದಾದಿಯರು ನಿಜವಾದ ಆರೋಗ್ಯ ಸಂರಕ್ಷಕರಾಗಿದ್ದಾರೆ ಎಂದು ಹೇಳಿ ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ನರ್ ವೀಲ್ ಕ್ಲಬಿನ ಅಧ್ಯಕ್ಷೆ ರೇಷ್ಮಾ ಬಾವಾಜಿಯವರು ವಹಿಸಿ ಮಾತನಾಡುತ್ತಾ, ನಗರದ ಇನ್ನರ್ ವೀಲ್ ಕ್ಲಬಿನ ಕಾರ್ಯ ಚಟುವಟಿಕೆಗಳಿಗೆ ಕ್ಲಬ್ಬಿನ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಸಾರ್ವಜನಿಕರು, ಸಂಘ ಸಂಸ್ಥೆಗಳು ತುಂಬು ಹೃದಯದ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಕಾರ್ಯಕ್ರಮವನ್ನು ನಿವೃತ್ತ ನರ್ಸ್ ಅಧೀಕ್ಷಕಿಯರಾದ ಪ್ರೇಮ ಬಾವಾಜಿ ಮತ್ತು ಶಕುಂತಲಾ ಪೈ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಹಾಗೂ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಒಟ್ಟು 50 ದಾದಿಯರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಇನ್ನರ್ ವೀಲ್ ಕ್ಲಬ್ಬಿನ ಪದಾಧಿಕಾರಿಗಳಾದ ರೇಷ್ಮ ಭಾವಾಜಿ ಸ್ವಾಗತಿಸಿದರು. ಭಾವನಾ ಅಂಕೋಲೆಕರ್ ವಂದಿಸಿದರು. ನೀಲಾಂಬಿಕಾ ಕಣಿವೆಹಳ್ಳಿ ಮತ್ತು ಡಾ.ತೃಪ್ತಿ ನಾಯಕ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ಬಿನ ಪದಾಧಿಕಾರಿಗಳು, ಸದಸ್ಯರು ಹಾಗೂ ದಾದಿಯರು ಉಪಸ್ಥಿತರಿದ್ದರು.