ವೆಂಕಟರಮಣನ ಸನಿಹದಲ್ಲಿ ಯುವ ಬ್ರಿಗೇಡ್ ಸ್ವಚ್ಛತೆ : ಮದ್ಯದ ಬಾಟಲಿಗಳ ರಾಶಿ ಆರಿಸಿದ ಕಾರ್ಯಕರ್ತರು

ಅಂಕೋಲಾ: ಒಂದೆಡೆ ಪುರಾಣ ಪ್ರಸಿದ್ಧ ವೆಂಕಟರಮಣ ದೇವಾಲಯ. ಇನ್ನೊಂದೆಡೆ ಭವಿಷ್ಯ ನಿರ್ಮಾಣಕ್ಕೆ ವೇದಿಕೆಯಾಗಿರುವ ಮಕ್ಕಳ ಪ್ರಜ್ಞಾಲಯ. ಇವೆರಡರ ಸನಿಹದ ಮೈದಾನದಲ್ಲಿ ಎಲ್ಲೆಂದರಲ್ಲಿ ನಶೆಯೇರಿದ ಮದ್ಯೆ ಬಾಟಲಿಗಳು. ಇದು ಅಂಕೊಲಾದ ದೊಡ್ಡ ದೇವರು ವೆಂಕಟರಮಣ ದೇವಸ್ಥಾನ ಮತ್ತು ಪೂರ್ಣ ಪ್ರಜ್ಞಾ ಶಾಲೆಗೆ ಹೊಂದಿಕೊಂಡಿರುವ ಮೈದಾನದ ಪರಿಸ್ಥಿತಿ. ರಾತ್ರಿಯ ವೇಳೆ ನಶೆ ಏರಿಸಲು ಬಂದವರು ಅಡ್ಡಾದಿಡ್ಡಿ ಖಾಲಿ ಬಾಟಲಿಗಳನ್ನು ಎಸೆದು ಅಲ್ಲಿನ ಬಯಲು ಪ್ರದೇಶವನ್ನು ಬಾಟಲಿಗಳ ಪ್ರದೇಶ ಎನ್ನುವಂತೆ ಮಾಡಿದ್ದಾರೆ.

ಬಾಟಲಿಗಳ ಮತ್ತು ಕಸದ ರಾಶಿಯನ್ನು ಕಂಡು ಅಂಕೋಲಾದ ಯುವ ಬ್ರಿಗೇಡ್ ಕಾರ್ಯಕರ್ತರು ರವಿವಾರ
ಸ್ವಚ್ಚಗೊಳಿಸದರು. ಈ ವೇಳೆ ಮಾತನಾಡಿದ ಯುವ ಬ್ರಿಗೇಡ್ ಪ್ರಮುಖ ಸಂದೀಪ್ ಗಾಂವ್ಕರ್, ಈ ಮೈದಾನ ಪ್ರಕೃತಿಯ ಮಡಿಲಲ್ಲಿದ್ದು ಇದನ್ನು ಸ್ವಚ್ಛವಾಗಿಡುವುದು ನಮ್ಮ ಬದ್ಧತೆಯಾಗಬೇಕು. ಮಕ್ಕಳು ಆಟವಾಡಲು ಬರುವುದರಿಂದ ಅವರ ಸುರಕ್ಷತೆ ಕಾಪಾಡಬೇಕು. ಇನ್ನು ಮುಂದಾದರೂ ಪ್ರಜ್ಞಾವಂತ ನಾಗರೀಕರು ಕಸವನ್ನು ಹಾಗೂ ಮದ್ಯದ ಬಾಟಲಿಗಾನ್ನು ಎಸೆಯುವುದನ್ನು ನಿಲ್ಲಿಸಬೇಕು ಎಂದರು.
ಮೂರು ಗಂಟೆಗೂ ಅಧಿಕ ಕಾಲ ಯುವ ಬ್ರಿಗೇಡ್ ಕಾರ್ಯಕರ್ತರು ಮೈದಾನವನ್ನು ಸ್ವಚ್ಛಗೊಳಿಸುವಲ್ಲಿ ನಿರತರಾಗಿದ್ದರು. ಮೈದಾನದ ಸುತ್ತಮುತ್ತಲು ಹರಡಿಕೊಂಡಿದ್ದ ಮಧ್ಯದ ಬಾಟಲಿಗಳನ್ನು ಒಂದೆಡೆ ಸಂಗ್ರಹಿಸಿ ವಿಲೇವಾರಿ ಮಾಡುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಯಿತು.

ಯುವ ಸಮುದಾಯದಿಂದಲೇ ನಿರ್ಮಾಣವಾಗಿರುವ ಕಸ ಮತ್ತು ಮಧ್ಯದ ರಾಶಿಯನ್ನು, ಯುವಕರೇ ಯುವ ಬ್ರಿಗೇಡ್ ಮೂಲಕ ಸ್ವಚ್ಛಗೊಳಿಸಿದ ರೀತಿ ಮೆಚ್ಚುಗೆಗೆ ಪಾತ್ರವಾಯಿತು. ಯುವ ಬ್ರಿಗೇಡ್ ಪ್ರಮುಖರಾದ ಸಂದೀಪ ಗಾಂವಕರ ಪ್ರವೀಣ್ ನಾಯ್ಕ್ , ಪ್ರಜ್ವಲ್ ನಾಯ್ಕ್, ಗಿರೀಶ್ ಶೆಟ್ಟಿ , ಚಂದ್ರಕಾಂತ ಗಾಂವಕರ, ಸಂದೇಶ ಎಸ್ ಸುಪ್ರೀತ್ ಮುಂತಾದವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.