ದಾಂಡೇಲಿ : ಮರಳಿನ ದರ ಗಗನಕ್ಕೆ ಏರುತ್ತಿದ್ದಂತೆಯೇ ಅಕ್ರಮ ಮರಳು ದಂಧೆ ಯಾರ ಹಂಗಿಲ್ಲದೆ ಬಿಂದಾಸ್ ಆಗಿ ನಡೆಯತೊಡಗಿದೆ.
ನಗರದ ಕಾಳಿ ನದಿಯಲ್ಲಿ ರಾತ್ರಿ ಸಮಯದಲ್ಲಿ ಎಗ್ಗಿಲ್ಲದೆ ಮರಳನ್ನು ತೆಗೆಯಲಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಗೊತ್ತಿದೆಯೋ ಇಲ್ಲವೋ ಎನ್ನುವ ಪ್ರಶ್ನೆ ನಗರದಲ್ಲಿ ಚರ್ಚೆಯಲ್ಲಿದೆ. ಗೊತ್ತಿದ್ದರೆ ಗೊತ್ತಿದ್ದು ಯಾಕೆ ಸುಮ್ಮನಾಗಿದ್ದಾರೆ?. ಗೊತ್ತಿಲ್ಲದಿದ್ದರೆ ಯಾಕೆ ಗೊತ್ತಾಗಿಲ್ಲ ಎನ್ನುವುದೇ ಹತ್ತು ಹಲವು ಅನುಮಾನಕ್ಕೆ ಕಾರಣವಾಗತೊಡಗಿದೆ.
ಇನ್ನೂ ರಾಮನಗರದ ಪಾಂಡರಿ ನದಿಯಿಂದ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿರುವುದು ಮಾಮುಲಿ ಎಂಬಂತಾಗಿದೆ. ಬರ್ಚಿ ಮಾರ್ಗವಾಗಿ ಬರುವುದನ್ನು ಕಳೆದ ವರ್ಷದಿಂದ ನಿಲ್ಲಿಸಲಾಗಿದ್ದು, ಜೋಯಿಡಾ, ಬಾಪೇಲಿ ಮಾರ್ಗವಾಗಿ ಬರತೊಡಗಿದೆ. ದಾಂಡೇಲಿಯ ಕೋಗಿಲಬನ ಹಾಗೂ ಬೈಲುಪಾರ್ ಮತ್ತು ಬಿರಂಪಾಲಿಯಲ್ಲಿ ಹರಿಯುವ ಕಾಳಿ ನದಿಯಿಂದ ಅಕ್ರಮವಾಗಿ ರಾತ್ರಿ ಮರಳು ತೆಗೆಯಲಾಗುತ್ತಿದ್ದು, ಹೀಗೆ ಅಕ್ರಮವಾಗಿ ತೆಗೆದ ಮರಳನ್ನು ಸೂರ್ಯ ಉದಯಿಸುವ ಮುನ್ನವೇ ಟ್ರ್ಯಾಕ್ಟರ್ ಮೂಲಕ ಸಾಗಾಟ ಮಾಡಿ ನಗರದ ಆಯಕಟ್ಟಿನ ಜಾಗದಲ್ಲಿ ದಾಸ್ತಾನು ಮಾಡಲಾಗುತ್ತಿದೆ. ಅಕ್ರಮ ಮರಳು ಸಾಗಾಟ ಮಾಡಲಾಗುವ ರಸ್ತೆಯಲ್ಲಿ ಸಿಗುವ ಕೋಗಿಲಬನ ಮತ್ತು ಬೈಲುಪಾರಿನಲ್ಲಿ ಅರಣ್ಯ ಚೆಕ್ ಪೊಸ್ಟ್ 24×7 ಕಾರ್ಯನಿರ್ವಹಣೆಯಲ್ಲಿದ್ದರೂ, ಅಕ್ರಮ ಮರಳು ಸಾಗಾಟ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ. ನಿಯತ್ತಾಗಿ ಸರಕಾರದ ಸಂಬಳವನ್ನು ತೆಗೆದುಕೊಳ್ಳುವ ಚೆಕ್ಪೋಸ್ಟ್ ನಲ್ಲಿರುವ ಸಿಬ್ಬಂದಿಗಳಿಗೆ ಅಕ್ರಮ ಮರಳು ಸಾಗಾಟ ಮಾಡುವ ವಾಹನಗಳನ್ನು ತಡೆ ಹಿಡಿದು ಸೂಕ್ತ ಕ್ರಮವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮುಂದಾಗಲು ಧೈರ್ಯ ಇಲ್ಲದಾಯಿತೆ?, ಮೇಲಾಧಿಕಾರಿಗಳ ಆಜ್ಞೆಯೇ?, ರಾಜಕೀಯ ಒತ್ತಡವೇ?, ಮಾಮೂಲಿಗೆ ಕೈ ಚಾಚಿ ಸುಮ್ಮನಾದರೇ ಎಂಬ ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದೆ.
ಅಕ್ರಮ ಮರಳು ದಾಸ್ತಾನು ಮತ್ತು ಸಾಗಾಟವನ್ನು ನಿಯಂತ್ರಿಸಬೇಕಾದ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಾಣ ಮೌನವನ್ನು ವಹಿಸಿ, ಇಲಾಖೆಗೆ ಹಾಗೂ ವೃತ್ತಿ ಘನತೆಗೆ ಚ್ಯುತಿ ಬರುವ ರೀತಿಯಲ್ಲಿ ನಡೆದುಕೊಳ್ಖುತ್ತಿದ್ದಾರೆಯೆ ಎಂಬ ಅನುಮಾನ ಇದೀಗ ದಟ್ಟವಾಗಿ ಮೂಡತೊಡಗಿದೆ.