ಅಂಕೋಲಾ : ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕ ಅಂಕೋಲಾ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಂಕೋಲಾ ಇವರ ಸಹಯೋಗದಲ್ಲಿ ದಿನಾಂಕ : 3-1-2024ರಂದು ಅಕ್ಷರದವ್ವ ಮಾತೆ ಸಾವಿತ್ರಿ ಬಾಯಿ ಪುಲೆ ಅವರ ಜನ್ಮದಿನವನ್ನು ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳ ಸೇವೆಯನ್ನು ಗುರ್ತಿಸಿ ಸನ್ಮಾನಿಸಿ ಅಭಿನಂದಿಸುವ ಹಾಗೂ ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸುವ ಮೂಲಕ ತುಂಬಾ ಅರ್ಥಪೂರ್ಣವಾಗಿ ಸ.ಹಿ.ಪ್ರಾ. ಶಾಲೆ, ಅಂಕೋಲಾ ನಂ. 1ರಲ್ಲಿ ಆಚರಿಸಲಾಯಿತು.
ಸಾವಿತ್ರಿಬಾಯಿ ಫುಲೆ ಸಂಘ ತಾಲೂಕು ಘಟಕ ಅಂಕೋಲಾ ಅಧ್ಯಕ್ಷೆ ಶೋಭಾ ಎಸ್. ನಾಯಕ ಪ್ರಾಸ್ತಾವಿಕ ಮಾತನಾಡಿ, ನಮ್ಮೆಲ್ಲ ಮಹಿಳೆಯರಿಗೂ ಪ್ರೇರಣೆಯಾಗಿರುವ ಮಾತೆ ಸಾವಿತ್ರಿಬಾಯಿ ಫುಲೆ ಜನ್ಮದಿನವನ್ನು ಆಚರಿಸಲು ಸೇರಿದ ಗಣ್ಯರೆಲ್ಲರನ್ನು ಸ್ವಾಗತಿಸಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ಮಂಗಲಲಕ್ಷ್ಮೀ ಪಾಟೀಲ ಮಾತನಾಡಿ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡ ಪ್ರತಿಭೆಗಳನ್ನು ಸನ್ಮಾನಿಸಿ ಅವರ ನಿಸ್ವಾರ್ಥ ಸೇವೆ ಸಮಾಜದ ಎದುರಿಗೆ ತೆರೆದಿಟ್ಟ ಬಗ್ಗೆ ಅಭಿನಂದಿಸಿದರು. ತಾಲೂಕಿನ ಸಾವಿತ್ರಿಬಾಯಿ ಫುಲೆ ಸಂಘ ಒಳ್ಳೆಯ ಕಾರ್ಯ ಮಾಡುತ್ತಿದೆ. ಅದಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಬಲವಾಗಿ ನಿಂತಿರುವುದು ಶ್ಲಾಘನೀಯ ಎಂದರು. ಸಮಾಜಮುಖಿ ಕೆಲಸದಲ್ಲಿ ತೊಡಗಿರುವ ನಾಟಿ ವೈದ್ಯೆ ದೇವಿ ಗೌಡ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸಿ ವಿಶ್ರಾಂತ ಜೀವನ ನಡೆಸುತ್ತಿರುವ ರಮಾಬಾಯಿ ಎಸ್. ನಾಯಕ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಮಂಜುನಾಥ ವಿ. ನಾಯಕ ಮಾತನಾಡಿ, ತಮ್ಮ ಅಂಕೋಲಾ ತಾಲೂಕಿನ ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷರಾದಿಯಾಗಿ ಎಲ್ಲ ಮಹಿಳೆಯರು ತುಂಬಾ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಖುಷಿಯ ಸಂಗತಿ ಎಂದು ಮನದಾಸೆಯನ್ನು ವ್ಯಕ್ತಪಡಿಸಿದರು.
ಸನ್ಮಾನಿತರಾದ ದೇವಿ ಗೌಡ ಹಾಗೂ ರಮಾಬಾಯಿ ನಾಯಕ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಾವಿತ್ರಿಬಾಯಿ ಫುಲೆ ತಮ್ಮನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನಮಗೆ ತುಂಬಾ ಖುಷಿ ಕೊಟ್ಟಿದೆ. ಕಾಯಕ ಹೀಗೆ ಮುಂದುವರೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅತಿಥಿಯಾಗಿ ಉಪಸ್ಥಿತರಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಗದೀಶ ನಾಯಕ ಹೊಸ್ಕೇರಿ ಮಾತನಾಡಿ, ಸನ್ಮಾನಿತರ ಕಿರು ಪರಿಚಯ ಮಾಡುವುದರ ಮೂಲಕ ಅನೇಕ ಪ್ರತಿಭೆಗಳು ಎಲೆಮರೆಯ ಕಾಯಿಯಂತಿದ್ದು ಅವರನ್ನು ಗುರುತಿಸಿ ಸಮಾಜಕ್ಕೆ ಅವರನ್ನು ಪರಿಚಯಿಸುವ ಕಾರ್ಯ ಆಗಬೇಕಾಗಿದೆ. ಆ ದಿಶೆಯಲ್ಲಿ ಸಾವಿತ್ರಿಬಾಯಿ ಫುಲೆ ಸಂಘ ಕಾರ್ಯೋನ್ಮುಖವಾಗಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದೆ ಎಂದು ಮನತುಂಬಿ ಹಾರೈಸುವ ಈ ಕೆಲಸಕ್ಕೆ ತನ್ನ ಸಹಾಯವೂ ಸಂಪೂರ್ಣವಾಗಿ ಇದೆ ಎನ್ನುವ ಭರವಸೆ ನೀಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಮಂಜುನಾಥ ವೆಂಕಟ್ರಮಣ ನಾಯಕ ಸಾಂದರ್ಭಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಹರ್ಷಿತಾ ನಾಯಕ ಮಾತನಾಡಿ, ಮಹಿಳೆಯರಿಗೆ ಆಗುತ್ತಿರುವ ಅನ್ಯಾಯ ದೌರ್ಜನ್ಯ ನಿಲ್ಲಬೇಕು ಮಹಿಳೆಯರು ಆ ದಿಶೆಯಲ್ಲಿ ಧೈರ್ಯ ವಹಿಸಿ ಮುಂದೆ ಬಂದು ತಮಗಾಗುತ್ತಿರುವ ಅನ್ಯಾಯ ಖಂಡಿಸಿ ಜೀವನದಲ್ಲಿ ತಮ್ಮದೇ ಆದ ಹೆಜ್ಜೆಯ ಗುರುತನ್ನು ಮೂಡಿಸಿ ನೆನಪನ್ನು ಶಾಶ್ವತವಾಗಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀನಿವಾಸ ನಾಯಕ, ವೆಂಕಮ್ಮ ನಾಯಕ, ಭಾಗ್ಯಲಕ್ಷ್ಮೀ ನಾಯಕ, ದಿವಾಕರ ದೇವನಮನೆ, ತುಕಾರಾಮ ಬಂಟ, ಸಂಜೀವ ನಾಯಕ, ರೋಹಿದಾಸ ಬಂಟ, ವೇಲಾಯುಧ ನಾಯರ ಭಾಗವಹಿಸಿದ್ದರು. ಸಾವಿತ್ರಿಬಾಯಿ ಫುಲೆ ಸಂಘದ ಪ್ರಧಾನ ಕಾರ್ಯದರ್ಶಿ ನಾಗವೇಣಿ ಬಿ. ನಾಯಕ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಘದ ಸದಸ್ಯೆ ಸೃಜನಾ ನಾಯಕ ವಂದಿಸಿದರು.