ಜೋಯಿಡಾದಲ್ಲಿ ಪೊಲೀಸ್ ಇಲಾಖೆಯ ಆಶ್ರಯದಡಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾ

ದಾಂಡೇಲಿ : ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಗೊಳ್ಳಬೇಕಾದರೆ ವ್ಯಸನ ಮುಕ್ತ ಸಮಾಜ ನಿರ್ಮಾಣವಾಗಬೇಕೆಂದು ಸಿಪಿಐ ನಿತ್ಯಾನಂದ ಪಂಡಿತ್ ಹೇಳಿದರು.

ಅವರು ಮಂಗಳವಾರ ಜೊಯಿಡಾ ತಾಲೂಕು ಕೇಂದ್ರದಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣದ ಜಾಗೃತಿ ಜಾಥಾಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಾ ಸಾರ್ವಜನಿಕರು ಉತ್ತಮ ಸಮಾಜದ ಹೊಣೆಗಾರರಾಗಿದ್ದು, ನಾವು‌ ನಮ್ಮ ಜವಾಬ್ದಾರಿಯನ್ನು ಅರಿತು, ಕಾನೂನನ್ನು ಗೌರವಿಸಿ ಬದುಕನ್ನು ಕಟ್ಟಿಕೊಳ್ಳಬೇಕು. ವ್ಯಸನಗಳಿಗೆ ದಾಸರಾಗಿ ಸುಂದರ ಜೀವನವನ್ನು ಹಾಳು ಮಾಡುವ‌ ಮೂಲಕ ಸಮಾಜಕ್ಕೆ ಕೆಟ್ಟ ಸಂದೇಶ ಸಾರುವ ಬದುಕು ನಮ್ಮದಾಗಬಾರದು. ಈ ದಿಶೆಯಲ್ಲಿ ನಾವು ವ್ಯಸನ ಮುಕ್ತರಾಗಿ ಉತ್ತಮ ಸಮಾಜ ನಿರ್ಮಾಣದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಪಿಎಸ್ಐ ಮಹೇಶ ಮಾಳಿ ಜಾಥಾದ ನೇತೃತ್ವ ವಹಿಸಿ ಮಾತನಾಡುತ್ತಾ, ಇಂದಿನ ಮಕ್ಮಳೆ ನಾಳೆಯ ಪ್ರಜೆಗಳು. ಸಮಾಜದಲ್ಲಿ ಗೌರವಯುತವಾಗಿ ಬಾಳಬೇಕಾದರೆ ಸುಸಂಸ್ಕೃತ ನಡವಳಿಕೆಯ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ನಾವು ಬಾಗಿಗಳಾಗಬೇಕೆಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಆನಂತರ ತಾಲೂಕು ಕೇಂದ್ರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾವು ಸಂಚರಿಸಿತು. ಜಾಥಾ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಭಾಗವಹಿಸಿದ್ದರು