ಸರ್ಕಾರದ ಧನಸಹಾಯ ಇಲ್ಲದೇ ರಾಮ ಮಂದಿರ ನಿರ್ಮಾಣ; ಇದಕ್ಕೆ ಎಷ್ಟು ವೆಚ್ಚ? ಯಾರಿಂದ ಫಂಡಿಂಗ್?

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರದ ಉದ್ಘಾಟನೆಗೆ ದಿನಗಣನೆ ನಡೆದಿದೆ. ರಾಮಮಂದಿರದಂತೆ ಇಡೀ ಅಯೋಧ್ಯೆ ನಗರಿಯ ರೂಪುರೇಖೆಯೇ ಬದಲಾಗಿ ಹೋಗಿದೆ. 2019-2020ರಲ್ಲಿ ಇದರ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಮೂರು ವರ್ಷದಲ್ಲಿ ಮಂದಿರ ಸಿದ್ಧವಾಗಿದೆ. ಒಟ್ಟು 70 ಎಕರೆ ವಿಶಾಲ ಅಂಗಳದಲ್ಲಿ 2.7 ಎಕರೆಯಷ್ಟು ಜಾಗದಲ್ಲಿ ಮಂದಿರದ ನಿರ್ಮಾಣ ಮಾಡಲಾಗಿದೆ. ಉಚ್ಚತಮ ಗುಣಮಟ್ಟದ ಕೆಲಸಗಳಿಗೆ ಹೆಸರುವಾಸಿಯಾಗಿರುವ ಲಾರ್ಸನ್ ಅಂಡ್ ಟೌಬ್ರೋ ಸಂಸ್ಥೆ ಮಂದಿರ ನಿರ್ಮಿಸಿದೆ. ಎಲ್ ಅಂಟ್ ಟಿ ಸಂಸ್ಥೆ ಯಾವುದೇ ಲಾಭದ ಅಪೇಕ್ಷೆ ಇಲ್ಲದೇ ಕಾಮಗಾರಿ ಪೂರ್ಣಗೊಳಿಸಿದೆ.

ರಾಮ ಮಂದಿರ ನಿರ್ಮಾಣಕ್ಕೆ ಎಷ್ಟು ವೆಚ್ಚ?

ಅಯೋಧ್ಯೆ ರಾಮ ಮಂದಿರದ ನಿರ್ಮಾಣಕ್ಕೆ ಎಷ್ಟು ಹಣ ಖರ್ಚಾಗಿದೆ ಎಂಬ ಬಗ್ಗೆ ನಿಖರ ಮಾಹಿತಿ ಎಲ್ಲಿಯೂ ಬಹಿರಂಗವಾಗಿಲ್ಲ. ಈ ಮಂದಿರ ನಿರ್ಮಾಣದ ಒಟ್ಟು ವೆಚ್ಚ 18,000 ಕೋಟಿ ರೂ ಎಂದು ಅಂದಾಜಿಸಲಾಗಿದೆ ಎಂದು ಕೆಲ ವರದಿಗಳು ಹೇಳಿವೆ. ಆದರೆ, ಮಂದಿರ ಕಟ್ಟಲು ಆದ ಕಾಮಗಾರಿ ವೆಚ್ಚ 1,800 ಇರಬಹುದು ಎನ್ನಲಾಗಿದೆ. ಸುಪ್ರೀಂ ಕೋರ್ಟ್​ನಿಂದ ಮಂದಿರ ನಿರ್ಮಾಣಕ್ಕಾಗಿ ರಚನೆಯಾದ ಶ್ರೀ ರಾಮ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಂಸ್ಥೆ ರಾಮ ಮಂದಿರ ನಿರ್ಮಾಣ ಕಾಮಗಾರಿಗೆ 1,800 ಕೋಟಿ ರೂ ವೆಚ್ಚವಾಗುತ್ತದೆ ಎಂದು ಅಂದಾಜು ಮಾಡಿತ್ತು.

2020ರ ಫೆಬ್ರುವರಿಯಿಂದ 2023ರ ಮಾರ್ಚ್ 31ರವರೆಗೆ ಟ್ರಸ್ಟ್​ನಿಂದ 900 ಕೋಟಿ ರೂ ಬಿಡುಗಡೆ ಆಗಿದೆ. ಇನ್ನೂ ಕೂಡ 3,000 ಕೋಟಿ ರೂ ಹಣ ಖಾತೆಯಲ್ಲಿ ಉಳಿದಿದೆ ಎಂದು ಟ್ರಸ್ಟ್​ನ ಕಾರ್ಯದರ್ಶಿ ಚಂಪತ್ ರಾಯ್ ಕಳೆದ ವಾರವಷ್ಟೇ (ಡಿ. 30) ಮಾಹಿತಿ ನೀಡಿದ್ದರು.

ಮಂದಿರ ನಿರ್ಮಾಣ ವೆಚ್ಚದ ಜೊತೆಗೆ, ಭೂಸ್ವಾಧೀನ, ಮಂದಿರ ಅಂಗಳದ ಅಭಿವೃದ್ಧಿ ಇತ್ಯಾದಿ ಎಲ್ಲವಕ್ಕೂ ಸುಮಾರು 18,000 ಕೋಟಿ ರೂನಷ್ಟು ವೆಚ್ಚವಾಗಬಹುದು.

ಮಂದಿರ ನಿರ್ಮಾಣದ ವೆಚ್ಚಕ್ಕೆ ಯಾರಿಂದ ಹಣ ಸಹಾಯ?

ರಾಮ ಮಂದಿರ ನಿರ್ಮಾಣಕ್ಕೆ ಸರ್ಕಾರಿಂದ ಧನಸಹಾಯ ಪಡೆಯಲಾಗಿಲ್ಲ ಎಂಬುದು ಗಮನಾರ್ಹ. ಸಾರ್ವಜನಿಕರಿಂದ ಚಂದಾ ಹಣ ಪಡೆದು ಮಂದಿರ ಕಟ್ಟಲು ಬಳಸಲಾಗಿದೆ. ಅಯೋಧ್ಯೆಯ ಪ್ರತೀ ಮನೆ ಮನೆಯೂ ಹಣವನ್ನು ಕೊಟ್ಟಿವೆ. ಅಯೋಧ್ಯೆ ಮಾತ್ರವಲ್ಲ, ದೇಶಾದ್ಯಂತ ಬಹಳ ಕಡೆಗಳಿಂದ ಸಾರ್ವಜನಿಕರು ಮಂದಿರ ನಿರ್ಮಾಣಕ್ಕೆ ಚಂದಾ ಕೊಟ್ಟಿದ್ದಾರೆ.