ಅಯೋಧ್ಯೆಯ ರಾಮ ಮಂದಿರದಂತೆಯೇ ಶ್ರೀಕೃಷ್ಣನ ಜನ್ಮಭೂಮಿ ಮಥುರಾ ದಲ್ಲಿ ಶೀಘ್ರ ಬೃಹತ್ ದೇವಾಲಯ ನಿರ್ಮಿಸಲಾಗುತ್ತದೆ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ತಿಳಿಸಿದ್ದಾರೆ. ಇದೀಗ ಕೃಷ್ಣ ಜನ್ಮಭೂಮಿ ಸಮೀಕ್ಷೆಗೆ ನ್ಯಾಯಾಲಯ ಆದೇಶ ನೀಡಿದ್ದು , ಅಂತಿಮ ತೀರ್ಮಾನವೂ ಹಿಂದೂಗಳ ಪರವಾಗಿಯೇ ಇರಲಿದೆ ಎಂದು ದೃಢವಾಗಿ ನಂಬಿರುವುದಾಗಿ ಮೌರ್ಯ ತಿಳಿಸಿದ್ದಾರೆ.
ಕೃಷ್ಣ ಜನ್ಮಭೂಮಿಗೆ ಭೇಟಿ ನೀಡಿದ ದೇಶದ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿದರು ಮತ್ತು ಬಿಜೆಪಿ ಸರ್ಕಾರವು ಧಾರ್ಮಿಕ ಪ್ರವಾಸೋದ್ಯಮವನ್ನು ಹೆಚ್ಚಿಸಲು ಮಥುರಾ ಮತ್ತು ವೃಂದಾವನದ ಅಭಿವೃದ್ಧಿಗೆ ಕೋಟಿಗಟ್ಟಲೆ ಖರ್ಚು ಮಾಡಿದೆ. ಶ್ರೀಕೃಷ್ಣ ಮಂದಿರವನ್ನು ಕಟ್ಟಲು ಸಮಾಜವಾದಿ ಪಕ್ಷಕ್ಕೆ ಇಷ್ಟವಿಲ್ಲ ಎಂದು ಆರೋಪಿಸಿರುವ ಕೇಶವ್ ಪ್ರಸಾದ್ ಮೌರ್ಯ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಅಲ್ಪಸಂಖ್ಯಾತರ ಮತಕ್ಕಾಗಿ ಹಿಂದೂಗಳ ರಕ್ತ ಹರಿಸುತ್ತಿರುವ ಎಸ್‌ಪಿಗೆ ಶ್ರೀಕೃಷ್ಣನ ವಂಶಸ್ಥರ ಮತ ಬೇಕು, ಆದರೆ ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ಮಂದಿರ ಬೇಡ ಎಂದು ಮೌರ್ಯ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.
2021 ರಲ್ಲಿ, ಮೌರ್ಯ ಅವರು ಮಥುರಾದಲ್ಲಿ ಶ್ರೀ ಕೃಷ್ಣ ದೇವಾಲಯವನ್ನು ನಿರ್ಮಿಸಲು ಬಯಸುತ್ತೀರಾ ಅಥವಾ ಬೇಡವೇ ಎಂದು ಯಾದವ್ ಅವರನ್ನು ಕೇಳಿದ್ದರು. ಶ್ರೀ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದದ ಪ್ರಕರಣವು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿದೆ.