ಅಯೋಧ್ಯೆ ರಾಮಮಂದಿರದ 24‌ ಅರ್ಚಕರಲ್ಲಿ ಇಬ್ಬರು ಎಸ್ಸಿ, ಓರ್ವ ಒಬಿಸಿ ಅರ್ಚಕರು, ಮೂರು ತಿಂಗಳ ಗುರುಕುಲ ತರಬೇತಿ

ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಂದಿರಕ್ಕೆ‌ 24 ಅರ್ಚಕರನ್ನು ನೇಮಕ ಮಾಡಲಾಗಿದೆ. ಇವರಲ್ಲಿ ಇಬ್ಬರು ಎಸ್‌ಸಿ ಮತ್ತು ಒಬ್ಬರು ಒಬಿಸಿ ಸಮುದಾಯದವರಾಗಿದ್ದು ಮೂರು ತಿಂಗಳ ತರಬೇತಿ ನಂತರ ಈ ಅರ್ಚಕರು ನಿಯೋಜನೆಗೊಳ್ಳಲಿದ್ದಾರೆ. ತರಬೇತಿಯಲ್ಲಿರುವ ಅರ್ಚಕರು ಗುರುಕುಲದ ನಿಯಮಗಳನ್ನು ಪಾಲಿಸುತ್ತಿದ್ದಾರೆ.

ರಾಮಲಲ್ಲಾ‌ ಪೂಜೆಗೆ ಆಯ್ಕೆಯಾಗಿರುವ ಅರ್ಚಕರು ಮೊಬೈಲ್ ಫೋನ್ ಬಳಸುವಂತಿಲ್ಲ ಅಥವಾ ಯಾವುದೇ ಹೊರಗಿನವರೊಂದಿಗೆ ಸಂಪರ್ಕ ಹೊಂದುವಂತಿಲ್ಲ. ರಾಮಮಂದಿರದ ಮಹಂತ್ ಮಿಥಿಲೇಶ್ ನಂದಿನಿ ಶರಣ್ ಮತ್ತು ಮಹಂತ್ ಸತ್ಯನಾರಾಯಣ ದಾಸ್ ಅವರು ದೇವಾಲಯದ ವಿಗ್ರಹ ಪೂಜಿಸಲು ಪೌರೋಹಿತ್ಯ ಮತ್ತು ಆಚರಣೆಗಳ ತರಬೇತಿಯನ್ನು ನೀಡುತ್ತಿದ್ದಾರೆ.

ಬ್ರಾಹ್ಮಣೇತರರು ಮಂದಿರದ ಅರ್ಚಕರಾಗಿರುವುದು ಇದೆ ಮೊದಲಲ್ಲ, ದಕ್ಷಿಣ ಭಾರತದ ದೇವಾಲಯಗಳಲ್ಲಿ ಶೇ 70 ಪ್ರತಿಶತದಷ್ಟು ಅರ್ಚಕರು ಬ್ರಾಹ್ಮಣೇತರರು. ಶೈವ ಸಂಪ್ರದಾಯದ ದೇವಾಲಯಗಳಲ್ಲಿ ಬಹುತೇಕ ಬ್ರಾಹ್ಮಣೇತರ ಅರ್ಚಕರು ಪ್ರಾಬಲ್ಯ ಹೊಂದಿದ್ದಾರೆ.

ರಾಮಮಂದಿರ‌ಕ್ಕೆ‌ ಅರ್ಚಕರ‌ ನೇಮಕ ವಿಚಾರದಲ್ಲಿ ಕೇವಲ ಅರ್ಹತೆಯ ಆಧಾರದ ಮೇಲೆ ಮಾತ್ರ ಅರ್ಚಕರನ್ನು ಆಯ್ಕೆ ಮಾಡಲಾಗಿದೆ. ರಾಮನಂದಿ ಸಂಪ್ರದಾಯದಂತೆ ಎಲ್ಲ ಅರ್ಚಕರಿಗೂ ಮೂರು ತಿಂಗಳ ತರಬೇತಿ ನೀಡಲಾಗುತ್ತಿದೆ. ಈ ಸಮಯದಲ್ಲಿ ಈ ಯುವಕರು ಗುರುಕುಲದ ನಿಯಮಗಳನ್ನು ಅನುಸರಿಸುತ್ತಿದ್ದಾರೆ. ಮೊಬೈಲ್ ಬಳಸುವಂತಿಲ್ಲ ಅಥವಾ ಹೊರಗಿನವರನ್ನು ಸಂಪರ್ಕಿಸುವಂತಿಲ್ಲ.

ಅರ್ಚಕರ‌‌‌ ನೇಮಕದ‌ ಸಂದರ್ಶನದ‌ ವೇಳೆ‌ 14 ಪ್ರಶ್ನೆಗಳನ್ನು ಕೇಳಲಾಗಿತ್ತು. ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ 24 ಯುವಕರನ್ನು ಅರ್ಚಕರ‌ ಹುದ್ದೆಗೆ ನವೆಂಬರ್‌ನಲ್ಲಿ ಆಯ್ಕೆ ಮಾಡಲಾಗಿದೆ. ಮೂರು ಸುತ್ತಿನ ಸಂದರ್ಶನದ ನಂತರ 3240 ಅಭ್ಯರ್ಥಿಗಳ ಪೈಕಿ 25 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಒಬ್ಬರಾದ ಆಚಾರ್ಯ ದೈವಜ್ಞ ಕೃಷ್ಣ ಶಾಸ್ತ್ರಿ ಅವರು ಹಿಂದೆ‌ ಸರಿದಿದ್ದಾರೆ.

ಕೊನೆಯ ಸುತ್ತಿನ ಮೂರು ಪ್ರಶ್ನೆಗಳು ಅತ್ಯಂತ ಕಠಿಣವಾಗಿದ್ದವು. ಹನುಮಾನ್ ವೇದ ಧ್ಯಾನ ಮಂತ್ರ, ಸೀತೆಯ ಧ್ಯಾನ ಮಂತ್ರ ಮತ್ತು ಭರತ ಧ್ಯಾನ ಮಂತ್ರ ಹೆಚ್ಚು ಕಷ್ಟದ ಪ್ರಶ್ನೆಗಳಾಗಿದ್ದವು ಎನ್ನಲಾಗಿದೆ. ಮೊದಲ ಹಂತದಲ್ಲಿ ಸಂಧ್ಯಾ ವಂದನೆ, ಹೆಸರು, ಗೋತ್ರ, ಶಾಖ, ಪ್ರವರ ಮತ್ತು ಎರಡನೇ ಹಂತದಲ್ಲಿ ಆಚಾರ್ಯ ಪದವಿಗೆ ಅನುಗುಣವಾಗಿ ಪ್ರಶ್ನೆಗಳನ್ನು ಕೇಳಲಾಗಿತ್ತು.