ನವದೆಹಲಿ, ಜನವರಿ 2: ಲೋಕಸಭಾ ಚುನಾವಣೆಯಲ್ಲಿ ರಾಮಮಂದಿರ ನಿರ್ಮಾಣದ ಲಾಭ ಪಡೆಯಲು ಬಿಜೆಪಿ ಸಜ್ಜಾಗಿದೆ. ಜನವರಿ 22 ರಂದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಬಾಲರಾಮ ಮೂರ್ತಿಯ ಪಟ್ಟಾಭಿಷೇಕ ನಡೆಯಲಿದೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಬಳಿಕ ಏಪ್ರಿಲ್ ತಿಂಗಳೊಳಗೆ ದೇಶಾದ್ಯಂತ 2.5 ಕೋಟಿ ಜನರಿಗೆ ದರ್ಶನ ಸೌಲಭ್ಯಗಳನ್ನು ಒದಗಿಸಲು ಬಿಜೆಪಿ ಯೋಜಿಸಿದೆ.
ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಕ್ಷತ ಆಹ್ವಾನ ಕಾರ್ಯಕ್ರಮದಡಿ 10 ಕೋಟಿ ಜನರೊಂದಿಗೆ ನೇರವಾಗಿ ಸಂವಹನ ನಡೆಸಲು ಪಕ್ಷವು ಯೋಜಿಸಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಇಂದು ಮ್ಯಾರಥಾನ್ ಸಭೆ ನಡೆಸಿ ಈ ನಿಟ್ಟಿನಲ್ಲಿ ವಿವರವಾದ ರೂಪುರೇಷೆ ಸಿದ್ಧಪಡಿಸಲಿದ್ದಾರೆ.
ಇಂದು ನಡೆಯುವ ಸಭೆಯಲ್ಲಿ ದೇಶದ ಎಲ್ಲ ರಾಜ್ಯಗಳಿಂದ ಸಂಘಪರಿವಾರದ ನಾಯಕರು ಹಾಗೂ ವಿಹೆಚ್ಪಿ ನಾಯಕರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ವಿಹೆಚ್ಪಿ ಮತ್ತು ಆರ್ಎಸ್ಎಸ್ನ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ರೂಪುರೇಷೆ ಸಿದ್ಧಗೊಳ್ಳಲಿದೆ. ಪ್ರಾಣ ಪ್ರತಿಷ್ಠೆಯ ದಿನದಂದು ಇಡೀ ದೇಶವೇ ಸಂತಸ ಪಡುವಂತೆ ಮಾಡಲು ಕಾರ್ಯಕ್ರಮ ರೂಪಿಸಲಿದ್ದಾರೆ. ರಾಮಮಂದಿರ ಆಂದೋಲನದಲ್ಲಿ ಪ್ರತಿಪಕ್ಷಗಳ ಋಣಾತ್ಮಕ ಪಾತ್ರವನ್ನು ಹೆಚ್ಚು ಪ್ರಚಾರ ಮಾಡುವ ಬಗ್ಗೆಯೂ ಚರ್ಚೆ ನಡೆಯಲಿದೆ.
ಪ್ರತಿಪಕ್ಷಗಳ ಅಡ್ಡಗಾಲಿನ ಬಗ್ಗೆ ಕಿರುಪುಸ್ತಕ ಸಿದ್ಧ
ಈ ನಿಟ್ಟಿನಲ್ಲಿ ಬಿಜೆಪಿ ಕಿರುಪುಸ್ತಕವನ್ನು ಸಿದ್ಧಪಡಿಸಿದೆ. ಇದರಲ್ಲಿ ರಾಮಮಂದಿರ ನಿರ್ಮಾಣದ ಹಾದಿಯಲ್ಲಿ ಪ್ರತಿಪಕ್ಷಗಳು ಕಾಲಕಾಲಕ್ಕೆ ಒಡ್ಡುತ್ತಿರುವ ಅಡೆತಡೆಗಳ ಬಗ್ಗೆ ವಿವರವಾಗಿ ಬರೆಯಲಾಗಿದೆ.
ರಾಮಮಂದಿರ ಉದ್ಘಾಟನೆಗೂ ಮುನ್ನವೇ ಇಡೀ ದೇಶವನ್ನು ರಾಮಮಯ ಮಾಡಬೇಕೆಂಬುದು ಬಿಜೆಪಿಯ ತಂತ್ರವಾಗಿದ್ದು ಸೋಮವಾರದಿಂದಲೇ ಆರ್ಎಸ್ಎಸ್ ಮತ್ತು ವಿಎಚ್‌ಪಿ ಪೂಜಿತ್ ಅಕ್ಷತ್, ಪತ್ರಕ್ ಮತ್ತು ರಾಮಲಲ್ಲಾ ಚಿತ್ರಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ. ಕನಿಷ್ಠ ಹತ್ತು ಕೋಟಿ ಜನರನ್ನು ತಲುಪುವ ಯೋಜನೆ ಇದಾಗಿದೆ. ಪ್ರಾಣ ಪ್ರತಿಷ್ಠೆಯ ನಂತರ, ದೇಶದಾದ್ಯಂತ 2.5 ಕೋಟಿ ಜನರು ಏಪ್ರಿಲ್ ತಿಂಗಳವರೆಗೆ ರಾಮ ಮಂದಿರಕ್ಕೆ ಭೇಟಿ ನೀಡಬೇಕು. ಇದರಲ್ಲಿ ಪ್ರತಿ ಲೋಕಸಭೆ ಕ್ಷೇತ್ರದಿಂದ ಕನಿಷ್ಠ ಐದು ಸಾವಿರ ಜನರು ರಾಮಮಂದಿರಕ್ಕೆ ಭೇಟಿ ನೀಡಬೇಕು ಎಂಬ ರಣತಂತ್ರ ಹೆಣೆಯಲಾಗಿದೆ.
ಒಂದು ಲಕ್ಷ ಹಳ್ಳಿಗಳಲ್ಲಿ ಪ್ರಾಣ ಪ್ರತಿಷ್ಠಾಪನೆಯ ನೇರಪ್ರಸಾರ
ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ನಂತರ ಅಯೋಧ್ಯೆಗೆ ವಿಶೇಷ ರೈಲುಗಳು ವಿವಿಧ ರಾಜ್ಯಗಳಿಂದ ಸಂಚರಿಸಲಿವೆ. ಭೇಟಿ ನೀಡಿದ ಜನರು ಹಿಂತಿರುಗಿ ತಮ್ಮ ಗ್ರಾಮದಲ್ಲಿ ರಾಮಮಂದಿರದ ಬಗ್ಗೆ ಚರ್ಚಿಸುತ್ತಾರೆ. ಪ್ರಾಣ ಪ್ರತಿಷ್ಠೆಯ ದಿನದಂದು ಕನಿಷ್ಠ ಒಂದು ಲಕ್ಷ ಹಳ್ಳಿಗಳಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಇದಲ್ಲದೆ ಐದು ಲಕ್ಷ ದೇವಾಲಯಗಳಲ್ಲಿ ಪ್ರಾಣ ಪ್ರತಿಷ್ಠಾ ಉತ್ಸವವನ್ನು ಆಚರಿಸಲು ಪ್ಲಾನ್ ಮಾಡಲಾಗಿದೆ. ಜನವರಿ 22ರ ದಿನವನ್ನು ದೀಪಾವಳಿಯ ರೀತಿ ಆಚರಿಸಲು ಪಕ್ಷ ಯೋಚಿಸಿದೆ. ರಾಮಮಂದಿರ ಉದ್ಘಾಟನೆಯ ನಂತರದ ಕಾರ್ಯಕ್ರಮಗಳು ಹೆಚ್ಚಿರುವ ಕಾರಣ, ಆರ್ಎಸ್ಎಸ್, ವಿಎಚ್‌ಪಿಯ ಕಾರ್ಯಕ್ರಮಗಳಿಗೆ ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಬೆಂಬಲ ನೀಡುವಂತೆ ಸೂಚಿಸಲಾಗಿದೆ.