ಬಾರ್ಡೋಲಿ ಪ್ರತಿಷ್ಠಾನದಿಂದ ಪುಸ್ತಕಗಳ ಕೊಡುಗೆ


ಅಂಕೋಲಾ: ಪುಸ್ತಕಗಳು ಮನುಷ್ಯನ ಅತ್ಯುತ್ತಮ ಸ್ನೇಹಿತರಾಗಿದ್ದು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕಲಿಕೆಯ ಪ್ರಕ್ರಿಯೆಯಲ್ಲಿ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತಿದ್ದು, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿಯನ್ನು ಹೆಚ್ಚಿಸುವ ಕಾರ್ಯಮಾಡಬೇಕೆಂದು ಅಂಕೋಲೆಯ ಬಿಆರ್‌ಸಿ ಕೇಂದ್ರದ ಸಮನ್ವಯಾಧಿಕಾರಿ ಹರ್ಷಿತಾ ಗಾಂವಕರ ಹೇಳಿದರು. ಅವರು ಅಂಕೋಲೆಯ ಬಾರ್ಡೋಲಿ ಪ್ರತಿಷ್ಠಾನ ಏರ್ಪಡಿಸಿದ್ದ ಸರಕಾರಿ ಶಾಲೆಗಳಿಗೆ ಕನ್ನಡ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.


ಅಂಕೋಲೆಯ ಬಾರ್ಡೋಲಿ ಪ್ರತಿಷ್ಠಾನ ಉಡುಪಿಯ ಪುಸ್ತಕಪ್ರೇಮಿ ಹಾಗೂ ದಾನಿಗಳಾದ ಬಿ.ಆರ್.ನರಸಿಂಹರಾವ್ ಅವರ ಪ್ರಾಯೋಜಕತ್ವದಲ್ಲಿ ಅಂಕೋಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಗ್ರಂಥಾಲಯಗಳಿಗೆ ಪುಸ್ತಕ ನೀಡುವ ಕಾರ್ಯಕ್ರಮವನ್ನು ಇಲ್ಲಿಯ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ ಹಮ್ಮಿಕೊಂಡಿತ್ತು. ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನ, ಜ್ಞಾನಗಳಿಕೆಗೆ ಉಪಯುಕ್ತವಾಗುವ 60 ಸಾವಿರ ರೂಪಾಯಿ ಮೊತ್ತದ ಪುಸ್ತಕಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಪ್ರಭಾರಿ ಶಿಕ್ಷಣಾಧಿಕಾರಿ ಚಂದ್ರಕಾಂತ ನಾಯಕ ಸ್ವಾಗತಿಸಿದರು. ನಿವೃತ್ತ ಗ್ರಂಥ ಪಾಲಕ, ಲೇಖಕ ಮಹಾಂತೇಶ ರೇವಡಿಯವರು ಪುಸ್ತಕಗಳ ಪ್ರಯೋಜನದ ಕುರಿತು ತಿಳಿಹೇಳಿದರು. ಪ್ರತಿಷ್ಠಾನದ ವಿಠ್ಠಲ ಗಾಂವಕರ, ಬಿ.ಆರ್.ನರಸಿಂಹರಾವ್ ಅವರ ಪುಸ್ತಕ ಪ್ರೇಮವನ್ನು ವಿವರಿಸಿ ಇದು ಅತ್ಯಮೂಲ್ಯವಾದ ಕೊಡುಗೆ ಎಂದರು. ಶಿಕ್ಷಕರಾದ ಹಮ್ಮಣ್ಣ ನಾಯಕ ಅವರು ಧನ್ಯವಾದ ಸಮರ್ಪಿಸಿದರು. ತಾಲೂಕಿನ ವಿವಿಧ ಶಾಲೆಯ ಶಿಕ್ಷಕರು ಪುಸ್ತಕ ಸ್ವೀಕರಿಸಿದರು.