ಹೊನ್ನಾವರದಲ್ಲಿ ಪಾಲನೆಯಾಗದ ಸಂಚಾರ ನಿಯಮ ಟ್ರಾಫಿಕ್‌ ಸಮಸ್ಯೆಗೆ ಪರದಾಡ್ತಿರೋ ಸಾರ್ವಜನಿಕರು-ಪಾದಚಾರಿಗಳು…

ಹೊನ್ನಾವರ : ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಓಡಾಟ ಮತ್ತು ಪಾಲನೆಯಾಗದ ರಸ್ತೆ ಸಂಚಾರ ನಿಯಮದಿಂದಾಗಿ ಪಟ್ಟಣದಲ್ಲಿ ಟ್ರಾಫಿಕ್‌ ಸಮಸ್ಯೆ ಉಂಟಾಗಿ ಸಾರ್ವಜನಿಕರು-ಪಾದಚಾರಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊನ್ನಾವರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಓಡಾಟ ಮತ್ತು ಪಾಲನೆಯಾಗದ ರಸ್ತೆ ಸಂಚಾರ ನಿಯಮದಿಂದಾಗಿ ಪಟ್ಟಣದಲ್ಲಿ ಟ್ರಾಫಿಕ್‌ ಸಮಸ್ಯೆ ಉಂಟಾಗಿ ಸಾರ್ವಜನಿಕರು-ಪಾದಚಾರಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಳೆದೆರಡು ದಿನಗಳಿಂದ ತೀರಾ ಟ್ರಾಫಿಕ್ ಸಮಸ್ಯೆ ಉದ್ಭವಿಸಿ ಸಂಚಾರ ಕಿಸ್ಕಿಂದೆಯಾಗಿ ಪರಿಣಮಿಸಿದೆ. ಮಂಗಳೂರು-ಕಾರವಾರ ಹಾಗೂ ಬೆಂಗಳೂರು ಸಂಪರ್ಕ ರಸ್ತೆ ಇದಾಗಿದ್ದರಿಂದ ಪ್ರತಿದಿನ ಸಾವಿರಾರು ಭಾರಿ ಮತ್ತು ಲಘು ವಾಹನಗಳು ಸಂಚಾರ ಮಾಡುತ್ತವೆ. ಆದರೆ ಕಟ್ಟುನಿಟ್ಟಾಗಿ ಸಂಚಾರ ನಿಯಮ ಜಾರಿಯಾಗದ ಕಾರಣ ತೀವ್ರ ಸಮಸ್ಯೆಯಾಗಿದೆ.

ಪ್ರತಿ ಶನಿವಾರ ವಾರದ ಸಂತೆಗೆ ವಿವಿಧ ಗ್ರಾಮಗಳ ಜನತೆ ದ್ವಿಚಕ್ರ ವಾಹನಗಳಲ್ಲಿ ಪಟ್ಟಣಕ್ಕೆ ಬರ್ತಾರೆ .ಇನ್ನು ಕೆಲವರು ಹೆದ್ದಾರಿ ಬದಿಯಲ್ಲಿಯೆ ವಾಹನ ಪಾರ್ಕಿಂಗ್ ಮಾಡಿ ಹೋಗುತ್ತಾರೆ. ಇದ್ರಿಂದ ಬಸ್ ಹಾಗೂ ಇತರ ವಾಹನಗಳ ಸುಗಮ ಸಂಚಾರಕ್ಕೆ ಬಹಳ ತೊಂದರೆಯಾಗ್ತಿದೆ. ಕೆಲವೊಮ್ಮೆ ಆಂಬುಲೆನ್ಸ್ ಸಹ ಟ್ರಾಫಿಕ್‌ನಲ್ಲಿ ಸಿಲುಕಿ ರೋಗಿಗಳು ಒದ್ದಾಡಿದ ಉದಾಹರಣೆಗಳಿವೆ.

ಪಟ್ಟಣದ ಗೇರುಸೊಪ್ಪ ವೃತ್ತ, ಶರಾವತಿ ವೃತ್ತ ಸದಾ ಜನಜಂಗುಳಿ ಪ್ರದೇಶವಾಗಿದ್ದು, ಸದಾ ಜನರಿಂದ ಗಿಜುಗುಡುತ್ತಿರುತ್ತದೆ. ಇದರಮದ್ಯೆ ಪಟ್ಟಣದ ಬಿಕಾಸಿ ತಾರಿಯಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಬೋಟಿಂಗ್ ಗೆ ಆಗಮಿಸುವ ಪ್ರವಾಸಿ ವಾಹನ ಸಂಚರಿಸುವಾಗಲು ಹೆಚ್ಚಿನ ಟ್ರಾಪಿಕ್ ಸಮಸ್ಯೆ ಉಂಟಾಗ್ತಿದೆ. ಜೊತೆಗೆ ಅಪಘಾತಗಳ ಭಯ ಸಾರ್ವಜನಿಕರನ್ನು ಆತಂಕಗೊಳಿಸಿದೆ. ಇತ್ತೀಚಿಗೆ ಸರ್ಕಾರಿ ಬಸ್ ಹಾಗೂ ಕಾರ್ ನಡುವೆ ಅಪಘಾತ ನಡೆದಿತ್ತು. ಅದ್ರಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದರು.

ಇನ್ನು ರವಿವಾರವು ಈ ಸಮಸ್ಯೆ ಮುಂದುವರೆದಿದ್ದು ಪಟ್ಟಣದ ರಾಮತಿರ್ಥ ಕ್ರಾಸ್ ನಿಂದ ಆರಂಭವಾಗಿ ಶರಾವತಿ ವೃತ್ತದ ವರೆಗೂ ಟ್ರಾಫಿಕ್ ಉಂಟಾಗಿತ್ತು. ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದೇ ಮೌನವಾಗಿರುವುದು ಸಂಚಾರ ಸಮಸ್ಯೆ ಹೇಗೆ ಪರಿಹಾರ ಕಾಣಲಿದೆ ಎಂಬ ಬಹುದೊಡ್ಡ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಇದೆಲ್ಲದರ ಮಧ್ಯೆ ಗಸ್ತು ಮತ್ತು ಪಿಎಸ್‌ಐ ವಾಹನ ಸಹ ಆಗಾಗ್ಗೆ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುತ್ತಿವೆ. ಆದ್ರೆ ಪೊಲೀಸರು ಮಾತ್ರ ಅದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಈ ವಿಷಯದಲ್ಲಿ ಸಾರ್ವಜನಿಕರು ಕೂಡ ಸಂಚಾರ ನಿಯಮಗಳ ಬಗ್ಗೆ ಕಾಳಜಿ ವಹಿಸುವುದು ಕೂಡ ಅವಶ್ಯಕವಾಗಿದೆ.

ಒಟ್ನಲ್ಲಿ ಇತ್ತೀಚಿನ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಉಲ್ಬಣಿಸಿದ್ದರಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ರಸ್ತೆ ದಾಟುವ ಪಾದಚಾರಿಗಳು ಸಾರ್ವಜನಿಕರು ಕೈಯಲ್ಲಿ ಜೀವ ಹಿಡಿದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದ್ರೂ ಪೋಲಿಸ್‌ ಇಲಾಖೆ ಪಟ್ಟಣದಲ್ಲಿ ಸಂಚಾರ ನಿಯಮ ಪಾಲನೆ ಬಗ್ಗೆ ಹಾಗೂ ಟ್ರಾಪಿಕ್‌ ಸಮಸ್ಯೆ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಈ ಸಮಸ್ಯೆಗೆ ಬ್ರೇಕ್‌ ಹಾಕ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.