ಹಳದೀಪುರದಲ್ಲಿ ಸ್ವ ಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ

ಹೊನ್ನಾವರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸಂಸ್ಥೆಯ ಹಳದೀಪುರ ವಲಯದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದವರು ಮಾಡಗೇರಿಯ ರಾಮನಾಥ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟಗಳ ಪದಗ್ರಹಣ ಸಮಾರಂಭವನ್ನು ಶಾಸಕ ದಿನಕರ ಶೆಟ್ಟಿ ಅವರು ಉದ್ಘಾಟಿಸಿದರು.

ಸ್ವಸಹಾಯ ಸಂಘಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಹತ್ತು ಮನಸ್ಸುಗಳು ಒಂದಾಗಿ ಆತ್ಮೀಯತೆಯಿಂದ ದುಡಿದಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಾಧಿಸಿ ತೋರಿಸಿದ್ದಾರೆ. ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ ಎಂಬ ಮಾತಿನಂತೆ ಜನರಲ್ಲಿ ಉಳಿತಾಯದ ಮನೋಭಾವನೆಯನ್ನು ಬೆಳೆಸಿದ ಕೀರ್ತಿ ಸ್ವಸಹಾಯ ಸಂಘಗಳಿಗೆ ಸಲ್ಲುತ್ತದೆ. ಮಾಶಾಸನ, ಇನ್ಶೂರೆನ್ಸ್, ಸಹಾಯಧನ ಸರ್ಕಾರದ ಅನೇಕ ಜನಪ್ರಿಯ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಿ, ಎಲ್ಲರೂ ಆ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಸಹಾಯಮಾಡುವುದು ಸಂಸ್ಥೆಯ ಇನ್ನೊಂದು ವಿಶೇಷತೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಾಯದಿಂದ ಇಂದು ಅದೆಷ್ಟೋ ಯುವಕ ಯುವತಿಯರು ಸ್ವ ಉದ್ಯೋಗವನ್ನು ಆರಂಭಿಸಿ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನರನ್ನು ಸಂಘಟಿತರಾಗಿಸುವುದರ ಜೊತೆಗೆ ಆರ್ಥಿಕವಾಗಿ ಹಾಗೂ ನೈತಿಕವಾಗಿ ಸದೃಢ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡುತ್ತಿರುವ ಪರಮಪೂಜ್ಯ ಹೆಗ್ಗಡೆಯವರಿಗೆ ಅನಂತಾನಂತ ಧನ್ಯವಾದಗಳು ಎಂದು ಹೇಳಿದರು.

ವಡಗೇರಿ ರಾಮನಾಥ ದೇವಸ್ಥಾನದ ಅಧ್ಯಕ್ಷ ಆರ್. ಎಮ್. ನಾಯ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ವಿ. ಬಾಬು ನಾಯ್ಕ, ಕೆ. ಡಿ. ಸಿ. ಸಿ. ಬ್ಯಾಂಕ್ ನಿರ್ದೇಶಕ ಶಿವಾನಂದ ಆರ್. ಹೆಗಡೆ, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಜೆ. ನಾಯ್ಕ, ನಿವೃತ್ತ ಶಿಕ್ಷಕ ಜಿ. ಆರ್. ಭಟ್ ಹಾಗೂ ಇತರರು ಹಾಜರಿದ್ದರು. ಧರ್ಮಸ್ಥಳ ಗ್ರಾಮಭಿವೃದ್ಧಿ ಟ್ರಸ್ಟ್ ನ ಯೋಜನಾಧಿಕಾರಿ ವಾಸಂತಿ ಅಮಿನ್ ಅವರು ಸ್ವಾಗತಿಸಿದರು. ರಮ್ಯಾ ಎ. ಜಿ. ಅವರು ವಂದಿಸಿದರು. ಗೋಪಾಲ ಎನ್. ಅವರು ಕಾರ್ಯಕ್ರಮವನ್ನು ನಿರೂಪಿಸಿದರು.