ಕೊಪ್ಪಳ: ಅಂಜನಾದ್ರಿ ಬೆಟ್ಟದಲ್ಲಿ ಮೊಳಗಿದ ಮೋದಿ, ಪುನೀತ್ ಜಯಘೋಷ

ಕೊಪ್ಪಳ, ಡಿ.24: ಹುನುಮನ ನಾಡು, ಹನುಮನ ಜನ್ಮಸ್ಥಳ ಅಂತಲೇ ಪ್ರಸಿದ್ದಿ ಪಡೆದಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ರಂಗೇರಿದೆ. ಆಂಧ್ರ, ತೆಲಂಗಾಣ ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಹನುಮ ಭಕ್ತರು ಆಗಮಿಸಿದ್ದು ಹನುಮ ಮಾಲಾಧಾರಿಗಳು ಹನುಮ ಮಾಲೆ ವಿಸರ್ಜನೆ ಮಾಡಲಿದ್ದಾರೆ. ಇನ್ನು ಅಂಜನಾದ್ರಿಯಲ್ಲಿ ಜೈ ಶ್ರೀರಾಮ, ಜೈ ಆಂಜನೇಯ ಎಂಬ ಘೋಷವಾಕ್ಯಗಳ ನಡುವೆ ಮೋದಿ ಪುನೀತ್ ರಾಜ್​ಕುಮಾರ್​ಗಳ ಘೋಷಣೆಗಳು ಮೊಳಗಿವೆ. ಸಾವಿರಾರು ಭಕ್ತರು ಪ್ರಧಾನಿ ನರೇಂದ್ರ ಮೋದಿ, ದಿ. ಪುನೀತ್ ರಾಜ್​ಕುಮಾರ್ ಭಾವಚಿತ್ರ ಹಿಡಿದು ಅಂಜನಾದ್ರಿಗೆ ಆಗಮಿಸಿದ್ದಾರೆ.

ಅಂಜನಾದ್ರಿ ಬೆಟ್ಟದಲ್ಲಿ ಇಂದು ಹನುಮ ಮಾಲೆ ವಿಸರ್ಜನೆ ನಡೆಯುತ್ತಿದೆ. ಹೀಗಾಗಿ ಹನುಮ ಮಾಲಾಧಾರಿಗಳಷ್ಟೇ ಅಲ್ಲದೆ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಆಗಮಿಸಿದ್ದಾರೆ. ಗದಗ ಮತ್ತು ಬೆಳಗಾವಿ ಜಿಲ್ಲೆಗಳಿಂದ ಬಂದಿದ್ದ ಭಕ್ತರು ಮೋದಿ ಮತ್ತು ಪುನೀತ್ ರಾಜ್​ಕುಮಾರ್ ಅವರ ಭಾವಚಿತ್ರ ಹಿಡಿದು ಜೈಕಾರ ಹಾಕಿದ್ರು.

ಇನ್ನು ಇಂದು ಹನುಮ ಮಾಲೆ ವಿಸರ್ಜನೆ ಹಿನ್ನೆಲೆ ಕೊಪ್ಪಳ ಜಿಲ್ಲಾಡಳಿತ ಮತ್ತು ಮುಜರಾಯಿ ಇಲಾಖೆ ಅಂಜನಾದ್ರಿ ಬೆಟ್ಟದಲ್ಲಿ ಸಾಕಷ್ಟು ವ್ಯವಸ್ಥೆ ಮಾಡಿದೆ. ಹನುಮ ಮಾಲೆ ವಿಸರ್ಜನೆ ಹಿನ್ನೆಲೆಯಲ್ಲಿ ಅಂಜನಾದ್ರಿ ಬೆಟ್ಟ ಇದೀಗ ವಿದ್ಯುತ್ ದೀಪಗಳಿಂದ‌ ಕಂಗೊಳಿಸುತ್ತಿದೆ. ಚಾತುರ್ಮಾಸ್ಯದಲ್ಲಿ ರಾವಣನ ವಿರುದ್ಧ ಯುದ್ದಕ್ಕೆ ಹೋಗಲು ಹನುಮ ಸಂಕಲ್ಪವನ್ನು ಮಾಡಿ ತಪಸ್ಸು ಮಾಡುತ್ತಾನೆ. ಇದೇ ಕಾರಣಕ್ಕೆ ಹನುಮನ ಭಕ್ತರು ಚಾತುರ್ಮಾಸದ ಸಮಯದಲ್ಲಿ ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಸಂಕಲ್ಪ ಮಾಡಿ ಹನುಮ ಮಾಲೆಯನ್ನು ಧರಿಸುತ್ತಾರೆ. ಡಿಸೆಂಬರ್ 24 ರಂದು ‌ಅಂಜನಾದ್ರಿ ಬೆಟ್ಟಕ್ಕೆ ಬಂದು ಹನುಮ ಮಾಲೆಯನ್ನು ವಿಸರ್ಜಿಸುತ್ತಾರೆ.

ಜಿಲ್ಲಾಡಳಿತದಿಂದ ಕ್ಯೂ ಆರ್ ಕೋಡ್ ವ್ಯವಸ್ಥೆ

ಅಂಜನಾದ್ರಿಯಲ್ಲಿ ಪಾರ್ಕಿಂಗ್ ಸ್ಥಳಗಳು ಯಾವ ಯಾವ ಕಡೆಗಿವೆ, ಪ್ರಥಮ ಚಿಕಿತ್ಸಾ ಕೇಂದ್ರಗಳು ಎಲ್ಲೆಲ್ಲಿವೆ, ಕುಡಿಯುವ ನೀರಿನ ಸ್ಥಳಗಳು, ಸಹಾಯವಾಣಿ ಕೇಂದ್ರಗಳು, ಸ್ಥಾನ ಗೃಹಗಳ ಸ್ಥಳಗಳು ಯಾವ ಯಾವ ಕಡೆಗಳಲ್ಲಿ ಇವೆ ಎಂಬುದು ಸೇರಿದಂತೆ ನಾನಾ ಸೌಲಭ್ಯಗಳು ದೊರಕುವ ಸ್ಥಳಗಳ ಮಾಹಿತಿಯನ್ನು ಈ ಕ್ಯೂಆರ್ ಕೋಡ್ ಮೂಲಕ ಪಡೆಯಬಹುದಾಗಿದೆ. ಅಂಜನಾದ್ರಿಗೆ ಬರೋ ಹನುಮ ಮಾಲಾಧಾರಿಗಳಿಗೆ ಊಟದ ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗಿದೆ. ಇನ್ನು ಇಂದು ಸಾವಿರಾರು ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಬರ್ತಿರೋ ಹಿನ್ನೆಲೆಯಲ್ಲಿ ಅಂಜನಾದ್ರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೂಡಾ ಏರ್ಪಡಿಸಲಾಗಿದೆ. ಇಬ್ಬರು ಎಎಸ್​​ಪಿ, 6 ಡಿಎಸ್​​​​ಪಿ, 26 ಸಿಪಿಐ, 62 ಪಿಎಸ್​ಐ, 94 ಎಎಸ್‌ಐ, 967 ಕಾನ್ಸ್​​ಟೇಬಲ್​​​​, 500 ಗೃಹರಕ್ಷಕ ದಳ ಸಿಬ್ಬಂದಿ, 12 ಡಿಎಆರ್, 5 KSRP ತುಕುಡಿ ಸೇರಿ 1657 ಪೊಲೀಸರ ನಿಯೋಜನೆ ಮಾಡಲಾಗಿದೆ.