ಭಾರತಕ್ಕೆ ಬಂತು ಆನೆಬಲ: ಮೊದಲ ಟೆಸ್ಟ್​ಗು ಮುನ್ನ ತಂಡ ಸೇರಿಕೊಂಡ ಸ್ಟಾರ್ ಬ್ಯಾಟರ್

ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ  ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾ ಸೇರಿಕೊಂಡಿದ್ದಾರೆ. ಈ ವಾರದ ಆರಂಭದಲ್ಲಿ ಕೌಟುಂಬಿಕ ತುರ್ತುಪರಿಸ್ಥಿತಿಯಿಂದಾಗಿ ಕೊಹ್ಲಿ ಲಂಡನ್‌ಗೆ ತೆರಳಿದ್ದರು. ಇದೀಗ ಡಿಸೆಂಬರ್ 26 ರಂದು ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ಗೆ ಮುಂಚಿತವಾಗಿ ಹಿಂತಿರುಗಿದ್ದಾರೆ. ವಿರಾಟ್ ಕೊಹ್ಲಿ ಲಂಡನ್‌ಗೆ ಹೋಗಿದ್ದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಆದರೆ, ವಿರಾಟ್ ಲಂಡನ್​ಗೆ ತೆರಳುವ ಮೊದಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದುಕೊಂಡಿದ್ದರು ಎಂದು ವರದಿ ಆಗಿದೆ.

ವಿರಾಟ್ ಕೊಹ್ಲಿ, ಡಿಸೆಂಬರ್ 15 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಭಾಗವಾಗಿ ಭಾರತದಿಂದ ಆಫ್ರಿಕಾ ತಲುಪಿದ್ದರು. ಆದಾಗ್ಯೂ, 3-4 ದಿನಗಳ ನಂತರ, ಅವರು ಇದ್ದಕ್ಕಿದ್ದಂತೆ ದಕ್ಷಿಣ ಆಫ್ರಿಕಾ ತೊರೆದು ಕೌಟುಂಬಿಕ ತುರ್ತುಪರಿಸ್ಥಿತಿಯಿಂದಾಗಿ ಭಾರತಕ್ಕೆ ಮರಳಬೇಕಾಯಿತು ಎಂದು ವರದಿಯಾಗಿತ್ತು. ಇದರಿಂದಾಗಿ ಅವರು 3 ದಿನಗಳ ಅಭ್ಯಾಸ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ”ಕೊಹ್ಲಿ ಲಂಡನ್​ಗೆ ತೆರಳುವ ಬಗ್ಗೆ ಮೊದಲೇ ನಿರ್ಧರಿಸಲಾಗಿತ್ತು. ಅದು ಎಮರ್ಜೆನ್ಸಿ ಅಲ್ಲ. ಇದು ರಾತ್ರೋರಾತ್ರಿ ತೆಗೆದುಕೊಂಡ ನಿರ್ಧಾರವೂ ಅಲ್ಲ. ಅವರು ತಂಡದ ಮ್ಯಾನೇಜ್‌ಮೆಂಟ್ ಮತ್ತು ಮಂಡಳಿಗೆ ಮೊದಲೇ ತಿಳಿಸಿದ್ದರು,” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಸರಣಿ ಗೆಲುವನ್ನು ಎದುರು ನೋಡುತ್ತಿರುವ ಭಾರತಕ್ಕೆ ಕೊಹ್ಲಿ ಪ್ರಮುಖರಾಗಿದ್ದಾರೆ. ಕಳೆದ ಪ್ರವಾಸದಲ್ಲಿ 1-0 ಮುನ್ನಡೆ ಸಾಧಿಸಿದ್ದ ಭಾರತ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ಮುಂದಿನ ಎರಡೂ ಪಂದ್ಯಗಳನ್ನು ಕಳೆದುಕೊಂಡು ನಿರಾಸೆ ಮೂಡಿಸಿತು. ಇದೀಗ 2023ರಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತಕ್ಕೆ ಸರಣಿ ಗೆಲ್ಲುವ ಸುವರ್ಣಾವಕಾಶವಿದೆ. ತಂಡವು ಈಗಾಗಲೇ ಏಕದಿನ ಸರಣಿಯನ್ನು 2-1 ರಿಂದ ಗೆದ್ದುಕೊಂಡಿದೆ ಮತ್ತು ಟಿ20ಐ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.

ಟೀಮ್ ಇಂಡಿಯಾದಲ್ಲಿ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಇಲ್ಲದಿರುವುದರಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮೇಲೆ ದೊಡ್ಡ ಜವಾಬ್ದಾರಿಯಿದೆ. ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ 14 ಇನ್ನಿಂಗ್ಸ್‌ಗಳಲ್ಲಿ 50 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 719 ರನ್ ಗಳಿಸಿದ್ದಾರೆ, ಇದರಲ್ಲಿ ಎರಡು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ. ಮತ್ತೊಂದೆಡೆ, ಭಾರತದ ನಾಯಕ ರೋಹಿತ್ ಶರ್ಮಾ 4 ಟೆಸ್ಟ್‌ಗಳಲ್ಲಿ ಕೇವಲ 123 ರನ್ ಗಳಿಸಿದ್ದಾರೆ.

ಏತನ್ಮಧ್ಯೆ, ಸ್ಟಾರ್ ವೇಗಿ ಮೊಹಮ್ಮದ್ ಶಮಿ ಮತ್ತು ಬ್ಯಾಟರ್ ರುತುರಾಜ್ ಗಾಯಕ್ವಾಡ್ ಸರಣಿಯಿಂದ ಹೊರಗುಳಿದಿರುವುದರಿಂದ ಟೆಸ್ಟ್ ಸರಣಿಗೆ ಮುಂಚಿತವಾಗಿ ಭಾರತಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಗಾಯಕ್ವಾಡ್ ಬದಲಿಗೆ ಅಭಿಮನ್ಯು ಈಶ್ವರನ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಕೂಡ ಸರಣಿಯಿಂದ ಹೊರಗುಳಿದಿದ್ದು, ಅವರ ಬದಲಿಗೆ ಕೆಎಸ್ ಭರತ್ ಕ್ಯಾಂಪ್ಸೇರಿಕೊಂಡಿದ್ದಾರೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಭಿಮನ್ಯು ಈಶ್ವರನ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪ ನಾಯಕ), ಪ್ರಸಿದ್ಧ್ ಕೃಷ್ಣ, ಕೆಎಸ್ ಭರತ್ (ವಿಕೆಟ್ ಕೀಪರ್).