ಬೆಂಗಳೂರು, ಡಿ.21: ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್‌ಗಳಲ್ಲಿ ಮುಂದೆ ಬರುವ ನಿಲ್ದಾಣಗಳ ಹೆಸರು ಪ್ರಕಟಿಸುವ ಆಡಿಯೋ ಅಳವಡಿಕೆಗೆ ಕರ್ನಾಟಕ ಹೈಕೋರ್ಟ್ ಏಪ್ರಿಲ್ 15ರ ಗಡುವು ನೀಡಿದೆ. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಕೆಲವು ಬಸ್‌ಗಳಲ್ಲಿ ಆಡಿಯೋ ಪ್ರಕಟಣೆಗಳನ್ನು ಅಳವಡಿಸಲಾಗಿತ್ತು. ಅದನ್ನು ಈಗ ನಿಲ್ಲಿಸಲಾಗಿದೆ ಎಂದು ಎನ್‌ಜಿಒ ಶ್ರೇಯಸ್ ಗ್ಲೋಬಲ್ ಟ್ರಸ್ಟ್ ನಡೆಸುತ್ತಿರುವ ವಕೀಲ ಮತ್ತು ದೃಷ್ಟಿಹೀನ ವ್ಯಕ್ತಿ ಶ್ರೇಯಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ವಿಭಾಗೀಯ ಪೀಠ ಕೈಗೆತ್ತಿಕೊಂಡಿತು.
ವಿಚಾರಣೆ ವೇಳೆ ಬಿಎಂಟಿಸಿ ಪರ ವಾದ ಮಂಡಿಸಿದ ವಕೀಲರು, ಮುಂಬರುವ ನಿಲ್ದಾಣಗಳ ಬಗ್ಗೆ ಜನರಿಗೆ ತಿಳಿಸಲು ಶೇಕಡಾ 58 ರಷ್ಟು ಬಸ್‌ಗಳಲ್ಲಿ ಆಡಿಯೋ ವ್ಯವಸ್ಥೆ ಅಳವಡಿಸಲಾಗಿದ್ದು, 2,562 ವಾಹನಗಳಿಗೆ ಅಳವಡಿಕೆ ಮಾಡಿಲ್ಲ. ಮುಂದಿನ ಆರು ತಿಂಗಳಲ್ಲಿ 1,141 ಬಸ್‌ಗಳಲ್ಲಿ ಆಡಿಯೋ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ವಾದ ಆಲಿಸಿದ ವಿಭಾಗೀಯ ಪೀಠ, 2024ರ ಏಪ್ರಿಲ್ 15 ರವರೆಗೆ ಬಸ್‌ಗಳಲ್ಲಿ ಆಡಿಯೋ ಅಳವಡಿಕೆ ಮಾಡುವಂತೆ ನಿರ್ದೇಶನ ನೀಡಿತು. ಅಳವಡಿಕೆ ಮಾಡದೇ ಇದ್ದಲ್ಲದೆ ಯಾವುದೇ ಕ್ಷಮೆಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿ ಏಪ್ರಿಲ್ 18ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿತು.