ಪಂಚಭೂತಗಳಲ್ಲಿ ಲೀನರಾದ ಕ್ಯಾಪ್ಟನ್ ಎಂವಿ ಪ್ರಾಂಜಲ್

ಬೆಂಗಳೂರು, ನ.25: ಜಮ್ಮುವಿನ ರಜೌರಿಯಲ್ಲಿ ಬುಧವಾರ (ನ.22) ದಂದು ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹೋರಾಡಿ ಕರ್ನಾಟಕದ ಹೆಮ್ಮೆಯ ಕುವರ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಹುತಾತ್ಮರಾಗಿದ್ದರು. ನಿನ್ನೆ ಕ್ಯಾಪ್ಟನ್ ಪ್ರಾಂಜಲ್ ​ಅವರ ಪಾರ್ಥಿವ ಶರೀರ, ಹುಟ್ಟೂರಾದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿಯ ನಂದನವನ ಲೇಔಟ್​​ನ ನಿವಾಸಕ್ಕೆ ಆಗಮಿಸಿದ್ದು, ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ 12.30ಕ್ಕೆ ನಿವಾಸದಿಂದ ತೆರೆದ ವಾಹನದಲ್ಲಿ ಕಲ್ಲುಬಾಳು ರಸ್ತೆ ಮೂಲಕ ಜಿಗಣಿಯ ಒಡಿಸಿ ಸರ್ಕಲ್​, ಜಿಗಣಿ ರಸ್ತೆ ಮೂಲಕ ಹರಪನ್ನಹಳ್ಳಿ – ಕೊಪ್ಪ ಗೇಟ್ – ಬೇಗಿಹಳ್ಳಿ – ಬನ್ನೇರುಘಟ್ಟ ರಸ್ತೆ – ನೈಸ್​ ರೋಡ್ – ಕೂಡ್ಲುಗೇಟ್​ ಮೂಲಕ ಸೋಮಸುಂದರಪಾಳ್ಯ ವಿದ್ಯುತ್​ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಕ್ಯಾಪ್ಟನ್​ ಪ್ರಾಂಜಲ್​ ಅವರ ಅಂತ್ಯಕ್ರಿಯೆ ನೆರವೇರಿದೆ.

ಪಂಚಭೂತಗಳಲ್ಲಿ ಲೀನರಾದ ಪ್ರಾಂಜಲ್

ಬೆಂಗಳೂರಿನ ಸೋಮಸುಂದರಪಾಳ್ಯದ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಎಂ.ವಿ ಪ್ರಾಂಜಲ್ ಅವರ ತಂದೆ ವೆಂಕಟೇಶ್​ ಅವರು ಅಂತಿಮ ವಿಧಿವಿಧಾನ ಪೂರೈಸಿದರು. ಭಾರತೀಯ ಸೇನೆಯಿಂದ ಕುಶಾಲ ತೋಪು ಸಿಡಿಸಿದ ಸೇನಾಧಿಕಾರಿಗಳು, ಎಂ.ವಿ ಪ್ರಾಂಜಲ್​ಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಪ್ರಾಂಜಲ್ ಪಾರ್ಥಿವ ಶರೀರದ ಮೇಲಿದ್ದ ತ್ರಿವರ್ಣಧ್ವಜವನ್ನು ಪೋಷಕರಿಗೆ ಹಸ್ತಾಂತರಿಸಿದರು. ಎಲ್ಲೇಡೆ ಕ್ಯಾಪ್ಟನ್ ಎಂ.ವಿ ಪ್ರಾಂಜಲ್​ ಅಮರ್ ರಹೇ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.

ಹಲವರಿಂದ ಅಂತಿಮ ನಮನ

ಇನ್ನು ಹುತಾತ್ಮ ಯೋಧ ಕ್ಯಾಪ್ಟನ್ ಎಂ.ವಿ ಪ್ರಾಂಜಲ್​ಗೆ ಸರ್ಕಾರಿ ಗೌರವ ಸಲ್ಲಿಸಿದ್ದು, ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನಂದನವನ ಲೇಔಟ್​ನ ನಿವಾಸದ ಎದುರು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್​, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಹಾಗೂ ಬೆಂಗಳೂರು ಗ್ರಾಮಾಂತರ SP ಮಲ್ಲಿಕಾರ್ಜುನ ಬಾಲದಂಡಿ ಅವರು ಅಂತಿಮ ನಮನ ಸಲ್ಲಿಸಿದರು. ಜೊತೆಗೆ ಮೆರವಣಿಗೆ ವೇಳೆ ಮಹಿಳೆ, ಮಕ್ಕಳು ಸೇರಿದಂತೆ ಸಾವಿರಾರು ಜನ ದರ್ಶನ ಪಡೆದುಕೊಂಡರು.