ಬೆಳಗಾವಿ: ಕಂಟೋನ್ಮೆಂಟ್ ಬೋರ್ಡ್ ಸಿಇಒ ಕೊಠಡಿಯಲ್ಲಿ ಸಿಕ್ಕ ಡೆತ್ ನೋಟ್​ನಲ್ಲಿ ಆತ್ಮಹತ್ಯೆಯ ಅಸಲಿ ಸತ್ಯ ಬಯಲು

ಬೆಳಗಾವಿ, ನ.25: ಈ ಆನ್ ಲೈನ್ ಗ್ಯಾಮ್ಲಿಂಗ್ ಗೇಮ್​ಗಳೇ ಹಾಗೇ ಒಂದು ಬಾರಿ ನೀವು ಅದರಲ್ಲಿ ಇಳಿದ್ರೆ ಮತ್ತೆ ಎದ್ದು ಬಂದ ಉದಾಹರಣೆಗಳೇ ಇಲ್ಲ. ಜನ ಸಾಮಾನ್ಯರಿಗೆ ತಿಳಿ ಹೇಳಬೇಕಿದ್ದ ಅಧಿಕಾರಿಯೊಬ್ಬರು ಇದೇ ಆನ್ ಲೈನ್ ಗ್ಯಾಮ್ಲಿಂಗ್​ಗೆ ಬಲಿಯಾಗಿದ್ದಾರೆ. ರಕ್ಷಣಾ ಇಲಾಖೆಯ ಅಡಿಯಲ್ಲಿ ಸಿಇಒ ಆಗಿ ಕೆಲಸ ಮಾಡ್ತಿದ್ದ ಅಧಿಕಾರಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಬಿಐ ದಾಳಿಯಾದ ನಾಲ್ಕೇ ದಿನಕ್ಕೆ ಅಧಿಕಾರಿ ಸಾವಿನ ದಾರಿ ಹಿಡಿದಿದ್ದಾರೆ.

ರಕ್ಷಣಾ ಇಲಾಖೆಗೆ ಒಳಪಡುವ ಬೆಳಗಾವಿಯ ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಳೆದ ಒಂದೂವರೆ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಕೆ. ಆನಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ಯಾಂಪ್ ಪ್ರದೇಶದಲ್ಲಿರುವ ತಮ್ಮದೇ ಸರ್ಕಾರಿ ನಿವಾಸದಲ್ಲಿ ಆನಂದ್ ಶವವಾಗಿ ಪತ್ತೆಯಾಗಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕ್ಯಾಂಪ್ ಠಾಣೆ ಪೊಲೀಸರಿಗೆ ಇದೊಂದು ಆತ್ಮಹತ್ಯೆ ಎಂಬುದು ಮೇಲ್ನೊಟಕ್ಕೆ ಕಂಡು ಬಂದಿತ್ತು. ಇನ್ನೂ ಮರಾಠಾ ಲಘ ಪದಾತಿ ದಳದ ಬ್ರಿಗೇಡಿಯರ್ ಸೇರಿದಂತೆ ಸೇನೆಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಬಂದು ಭೇಟಿ ನೀಡಿ ರಕ್ಷಣಾ ಇಲಾಖೆ ಮೇಲಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರು. ಎರಡು ದಿನಗಳಿಂದ ರೂಮ್ ನಿಂದ ಹೊರ ಬರದ ಆನಂದ್ ಅವರು ನಿನ್ನೆ ಇಡೀ ದಿನ ಊಟ ಸೇರಿದಂತೆ ಏನನ್ನೂ ಸ್ವೀಕರಿಸಿರಲಿಲ್ಲ. ಆದರೆ ನಿನ್ನೆ ಇಡೀ ದಿನ ಕಾದು ಇಂದು ಬೆಳಗ್ಗೆ ಮತ್ತೆ ರೂಮ್ ನ ಬಾಗಿಲು ಬಡೆದಿದ್ದಾರೆ. ಈ ವೇಳೆ ಬಾಗಿಲು ತೆಗೆಯದಿದ್ದಾಗ ಸ್ಥಳೀಯ ಪೊಲೀಸರಿಗೆ ಹಾಗೂ ಎಮ್ಎಲ್ಆರ್ಸಿ ಸೇನೆಯ ಮುಖ್ಯಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ.

ನಿವಾಸಕ್ಕೆ ಬಂದು ಒಳಗಿನಿಂದ ಬಾಗಿಲು ಲಾಕ್ ಆಗಿದ್ದನ್ನ ಗಮನಿಸಿದ ಪೊಲೀಸರು ಸಿಬ್ಬಂದಿ ಸಹಾಯ ಪಡೆದು ಡೋರ್ ಲಾಕ್ ಮುರಿದು ಒಳ ಹೋಗಿ ನೋಡಿದ್ದಾರೆ. ಈ ವೇಳೆ ಬೆಡ್ ಕೆಳಗೆ ಆನಂದ್ ಶವವಾಗಿ ಬಿದ್ದಿದ್ದನ್ನ ಗಮನಿಸಿ ಕೂಡಲೇ ಇಡೀ ರೂಮ್ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಹಾಸಿಗೆಯಲ್ಲಿ ವಿಷದ ಬಾಟಲ್ ಸಿಕ್ಕಿದ್ರೇ, ಇತ್ತ ಡೆತ್ ನೋಟ್ ಕೂಡ ಸ್ಥಳದಲ್ಲಿ ಸಿಕ್ಕಿದೆ. ಹೊರಗಿನಿಂದ ಯಾರಾದ್ರೂ ಬಂದಿರಬಹುದಾ ಅನ್ನೋದನ್ನ ಕೂಡ ಪರಿಶೀಲನೆ ಮಾಡಿ ನಂತರ ಶವವನ್ನ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಶಿಫ್ಟ್ ಮಾಡಿದ್ದಾರೆ. ಜೊತೆಗೆ ತಮಿಳುನಾಡಿನಲ್ಲಿರುವ ಆನಂದ್ ಅವರ ತಂದೆ ತಾಯಿಗೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಏನಿದು ದಂಡು ಮಂಡಳಿ?
1983ರಲ್ಲಿ ಬೆಳಗಾವಿಯಲ್ಲಿ ಸ್ಥಾಪನೆ ಆದ ದಂಡು ಮಂಡಳಿ ಸ್ಥಳೀಯ ಸಂಸ್ಥೆ ರೀತಿಯಲ್ಲಿ ಅಂದ್ರೆ ಮಹಾನಗರ ಪಾಲಿಕೆ ರೀತಿಯಲ್ಲಿ ಕೆಲಸ ಮಾಡುತ್ತದೆ. ಮರಾಠಾ ಲಘು ಪದಾತಿ ದಳ ಮಿಲಟರಿ ಟ್ರೇನಿಂಗ್ ಸೆಂಟರ್ ಇಲ್ಲಿ ಇರುವುದರಿಂದ ಅದರ ಅಭಿವೃದ್ದಿ, ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಇದನ್ನ ಸ್ಥಾಪನೆ ಮಾಡಿದ್ದಾರೆ. ಒಟ್ಟು ಏಳು ವಾರ್ಡ್ ಗಳಿದ್ದು ಇದಕ್ಕೂ ಐದು ವರ್ಷಕ್ಕೊಮ್ಮೆ ಚುನಾವಣೆ ಕೂಡ ನಡೆಯುತ್ತದೆ. ಅದರ ಸಿಇಒ ಆಗಿ ಆನಂದ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ನ.18ರಂದು ಇದೇ ದಂಡು ಮಂಡಳಿಯಲ್ಲಿ ಅಕ್ರಮವಾಗಿ ನೇಮಕಾತಿ ಮತ್ತು ಕಾಮಗಾರಿಯಲ್ಲಿ ಅಕ್ರಮ ಆರೋಪ ಕೇಳಿ ಬಂದಿತ್ತು. ಹೀಗಾಗಿ ಸಿಬಿಐ ಕೂಡ ದಾಳಿ ನಡೆಸಿ ಪರಿಶೀಲನೆ ಮಾಡಿ ವಾಪಾಸ್ ಆಗಿತ್ತು. ಇದಾದ ನಾಲ್ಕೇ ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು.

ಆದರೆ ಡೆತ್ ನೋಟ್ ಸಿಕ್ಕಿದ್ದು ಎಲ್ಲ ಸಂಶಯಗಳಿಗೂ ತೆರೆ ಬಿದ್ದಿದೆ. ಅಷ್ಟಕ್ಕೂ ಡೆತ್ ನೋಟ್ ನಲ್ಲಿ ಏನಿದೆ ಅನ್ನೋದನ್ನ ನೋಡೋದಾದ್ರೇ ಎರಡು ಪ್ರತ್ಯೇಕ ಡೆತ್ ನೋಟ್​ಗಳನ್ನ ಆತ್ಮಹತ್ಯೆಗೂ ಮುನ್ನ ಅಧಿಕಾರಿ ಬರೆದಿಟ್ಟಿದ್ದಾರೆ. ಒಂದು ತಂದೆ ತಾಯಿಗೆ ಕ್ಷಮೆಯಾಚಿಸಿ ಬೇರೆ ಪ್ರಪಂಚಕ್ಕೆ ಹೋಗುತ್ತಿದ್ದೇನೆ ನಿಮ್ಮನ್ನ ಸರಿಯಾಗಿ ನೋಡಿಕೊಳ್ಳಲು ಆಗಲಿಲ್ಲ. ಸಿಂಗಾಪುರದಲ್ಲಿರುವ ಸಹೋದರ, ಸಹೋದರಿಯರ ಒಡಲಲ್ಲಿ ಮತ್ತೆ ಹುಟ್ಟಿ ಬಂದು ನಿಮ್ಮನ್ನ ನೋಡಿಕೊಳ್ಳುವೆ ಅಂತಾ ಬರೆದಿದ್ದಾರೆ. ಇನ್ನೊಂದು ಡೆತ್ ನೋಟ್ ನಲ್ಲಿ ಆನ್ ಲೈನ್ ಮತ್ತು ಆಫ್ ಲೈನ್ ಗ್ಯಾಂಬ್ಲಿಂಗ್ ನಲ್ಲಿ ಸಾಕಷ್ಟು ಹಣ ಕಳೆದುಕೊಂಡಿರುವೆ. ಅದು ಲಕ್ಷಾಂತರ ರೂಪಾಯಿ ಸಾಲ ಆಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಸಾಲ ತೀರಿಸಲು ಆಗ್ತಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಇತ್ತ ಖುದ್ದು ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಮತ್ತು ಸ್ಥಳೀಯ ಶಾಸಕ ರಾಜು ಸೇಠ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಡೆತ್ ನೋಟ್ ಆಧರಿಸಿ ಅಧಿಕಾರಿ ಮೊಬೈಲ್, ಲ್ಯಾಪ್ ಟಾಪ್ ಎಫ್ಎಸ್ಎಲ್ ಗೆ ಕಳುಹಿಸಲು ಮುಂದಾಗಿದ್ದು ಜೊತೆಗೆ ದಂಡುಮಂಡಳಿ ಸಿಬ್ಬಂದಿ, ಅಧಿಕಾರಿಗಳು ಹಾಗೂ ಕುಟುಂಬಸ್ಥರನ್ನ ವಿಚಾರಣೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ. ಪ್ರಕರಣವನ್ನ ಎಲ್ಲಾ ಆಯಾಮದಲ್ಲಿ ತನಿಖೆ ಆರಂಭಿಸಿದ್ದು ಇತ್ತ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಿದ್ದಾರೆ. ಅದೇನೆ ಇರಲಿ ನಿಜಕ್ಕೂ ಒಬ್ಬ ಅಧಿಕಾರಿ ಗ್ಯಾಂಬ್ಲಿಂಗ್ ನಲ್ಲಿ ಹಣ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಇದೀಗ ಜೀವವನ್ನೇ ಕಳೆದುಕೊಂಡಿದ್ದು ದುರಂತ.