“ಯೋಗ್ಯತೆಯೊಂದೇ ಸಾಲದು ಯೋಗವೂ ಇರಬೇಕು” ಮೇಲ್ನೋಟಕ್ಕೆ ಇದು ಹತ್ತರ ಸಂಗಡ ಹನ್ನೊಂದನೆಯದು ಎನ್ನುವಂತಹ ನಾಣ್ಣುಡಿಯಂತೇ ತೋರಬಹುದು. ಆದರೆ ಅದರೊಳಗೆ ಅಡಕವಾಗಿರುವ ಅರ್ಥ ಎಷ್ಟೊಂದು ಕರಾಳವಾದುದು ಎಂಬುದು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು.
ಪ್ರತಿಭೆ ಯಾರಲ್ಲಿ ಯಾವ ರೀತಿಯಲ್ಲಿ ಬೇಕಾದರೂ ಇರಬಹುದು. ಅದು ಕಲೆ ,ಸಾಹಿತ್ಯ, ಶೈಕ್ಷಣಿಕ, ರಾಜಕೀಯ ಅಥವಾ ಕ್ರೀಡೆ ಹೀಗೆ ಯಾವುದೇ ಕ್ಷೇತ್ರದಲ್ಲಿಯಾದರೂ ಆಗಿರಬಹುದು. ಆದರೆ ಪ್ರತಿಭೆ ಹಾಗೂ ಸಾಮರ್ಥ್ಯ ಇದ್ದಾಕ್ಷಣ ಅಂತಹವರೆಲ್ಲರೂ ಪ್ರಸಿದ್ದಿ ಹೊಂದುತ್ತಾರೆ ಅಥವಾ ಜನಪ್ರೀಯತೆಗಳಿಸಿಕೊಂಡು ಇತಿಹಾಸದ ಪುಟಗಳಲ್ಲಿ ಸಾಧಕರ ಸಾಲಿನಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗದು.
ವ್ಯಕ್ತಿಯೊಬ್ಬನಲ್ಲಿರುವ ಸುಪ್ತ ಪ್ರತಿಭೆ ವಿಕಸನಗೊಂಡು ಅದು ಜನಮಾನಸದಲ್ಲಿ ಭದ್ರವಾಗಿ ನೆಲೆಗೊಂಡು ಸಮಾಜದಲ್ಲಿ ಆತನಿಗೆ ಮಾನ್ಯತೆ, ಗೌರವ ದೊರಕಬೇಕಾದರೆ, ಆ ವ್ಯಕ್ತಿಗೆ ತನ್ನಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸಮರ್ಪಕ ವೇದಿಕೆಯೊಂದು ತೀರಾ ಅತ್ಯವಶ್ಯಕ. ಅಂದರೆ ಮಾತ್ರ ಆತನಲ್ಲಿರುವ ಪ್ರತಿಭೆ ಸಾಧನೆಯ ರೂಪದಲ್ಲಿ ಧಾಖಲಾಗುವಂತಾಗುತ್ತದೆ. ಹಾಗೂ ಆತನ ಸಾಧನೆಗೆ ತಕ್ಕ ಪ್ರತಿಫಲ, ಜನಮನ್ನಣೆ ಅವನಿಗೆ ದೊರಕುವಂತಾಗುತ್ತದೆ. ಇಲ್ಲವಾದಲ್ಲಿ ಅವನಲ್ಲಿರುವ ವಿಶೇಷ ಪ್ರತಿಭೆ, ಸಾಮರ್ಥ್ಯಗಳೆಲ್ಲಾ ಎಲ್ಲೂ ಬೆಳಕಿಗೆ ಬಾರದೇ, ಪ್ರಪಂಚಕ್ಕೆ ಆತ ಅಜ್ಞಾತ ವ್ಯಕ್ತಿಯಾಗಿಯೇ ಉಳಿದು ಎಲೆ ಮರೆಯ ಕಾಯಿಯಂತಾಗಿಬಿಡುತ್ತಾನೆ.
ವಿಪರ್ಯಾಸದ ಸಂಗತಿ ಏನೆಂದರೆ ಈ ವೇದಿಕೆ ಎನ್ನುವ ಅವಕಾಶ ಅದೃಷ್ಟವಂತರ ಪಾಲಿಗೆ ಅವಶ್ಯಕಥೆ ಇದ್ದಾಗಲೆಲ್ಲಾ ಸುಲಭದಲ್ಲಿ ದೊರಕುವ ಅಂಗೈ ಒಳಗಿನ ಗಂಟು ಇದ್ದಂತೆ ಆಗಿದ್ದರೆ, ನತದೃಷ್ಟರ ಪಾಲಿಗೆ ಎಂದಿಗೂ ಕೈಗೆ ಎಟುಕದ ಕನ್ನಡಿಯೊಳಗಿನ ಗಂಟು ಆಗಿಬಿಡುತ್ತದೆ.
ಮಹಾನ್ ಸಾಧನೆಯೊಂದಿಗೆ ಜನಪ್ರೀಯತೆಯ ಉತ್ತುಂಗದಲ್ಲಿರುವ ಖ್ಯಾತಿವೇತ್ತರೆಲ್ಲ ತಮ್ಮ ಸಾಧನೆಯ ಪಯಣದುದ್ದಕ್ಕೂ ಕೇವಲ ಜಯ, ಯಶಸ್ಸನ್ನು ಮಾತ್ರ ಗಳಿಸುತ್ತಾ ಸಾಗಿಬಂದವರಲ್ಲ. ಅವರೂ ಕೂಡಾ ತಮ್ಮ ಪಯಣದ ಮಾರ್ಗದಲ್ಲಿ ಏಳು-ಬೀಳು, ಜಯಾಪಜಯ, ಸನ್ಮಾನ-ಅವಮಾನ ಗಳನ್ನ ಎದುರಿಸುತ್ತ ಸಾಗಿಬಂದವರೇ ಆಗಿದ್ದಾರೆ. ಆದರೆ ಅವರಲ್ಲಿರುವ ಯೋಗ್ಯತೆಗೆ ಯೋಗ ಸಾಥ್ ನೀಡಿದ್ದರಿಂದ, ಕೆಲವು ವೈಫಲ್ಯತೆ ಹಾಗೂ ಸೋಲುಗಳ ನಡುವೆಯೂ ಅವರಿಗೆ ಸಾಧನೆಗೆ ಹಾಗೂ ಸಮರ್ಥನೆಗೆ ಅವಕಾಶಗಳು ಮೇಲಿಂದ ಮೇಲೆ ದೊರಕುವಂತಾಯ್ತು. ಈ ಎಲ್ಲಾ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅವರು ಸಮಾಜದಲ್ಲಿ ತಮ್ಮ ಘನ ಅಸ್ತಿತ್ವವನ್ನು ಪ್ರತಿಷ್ಠಾಪಿಸುವಂತಾಯಿತು …
ಆದರೆ ವಿಷಾದಕರ ಸಂಗತಿ ಎನೆಂದರೆ ಯೋಗ ಸಾಥ್ ನೀಡದ ದುರದೃಷ್ಟವಂತ ಪ್ರತಿಭಾನ್ವಿತ ವ್ಯಕ್ತಿಗಳಿಗೆ ತಮ್ಮಲ್ಲಿರುವ ವಿಶೇಷ ಸಾಮರ್ಥ್ಯವನ್ನು ಪ್ರಸ್ತುತ ಪಡಿಸಲು ಸಮರ್ಪಕವಾದ ವೇದಿಕೆಯೇ ಸಿಗುವುದಿಲ್ಲ. ಒಂದು ವೇಳೆ ಸಿಕ್ಕಿದರೂ ಕೂಡಾ ಅಲ್ಲಿ ಅತ್ಯುತ್ತಮ ಸಾಧನೆಗೈದ ಹೊರತಾಗಿಯೂ, ಅವರದಲ್ಲದ ತಪ್ಪಿಗೆ, ಇನ್ಯಾವುದೋ ಕಾರಣಗಳಿಂದ ಮತ್ತೆ ಅವರಿಗೆ ಅವಕಾಶಗಳೇ ದೊರೆಯುವುದಿಲ್ಲ. ಅಂತಹ ಮಹನೀಯರ ಪಾಲಿಗೆ ಈ ಅವಕಾಶ, ಯಶಸ್ಸು, ಗೌರವ, ಪ್ರತಿಷ್ಠೆಗಳೆಲ್ಲ ಮರಳುಗಾಡಿನಲ್ಲಿನ ಮರೀಚಿಕೆ ಯಂತಾಗಿಬಿಡುತ್ತದೆ…
ಹೀಗೆ ಎಲ್ಲವೂ ಇದ್ದೂ, ಎಲ್ಲಿಯೂ ಸಲ್ಲದವರಂತೆ ಇರುವ ನತದೃಷ್ಟ ಪ್ರತಿಭಾನ್ವಿತರನ್ನು ಸಮಾಜದ ವಿವಿಧ ರಂಗಗಳಲ್ಲಿ ನಾವು ಕಾಣಬಹುದಾಗಿದೆ. ಇಂದು ಸುದ್ದಿಮಾದ್ಯಮಗಳು ಹಿಂದೆಂದಿಗಿಂತಲೂ ತುಂಬಾ ಶಕ್ತಿಶಾಲಿಯಾಗಿದೆ. ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರಗಳನ್ನು ಬಳಸಿಕೊಂಡು ತನ್ನ ವೈಷಾಲ್ಯತೆಯನ್ನು ತುಂಬಾ ವಿಸ್ತರಿಸಿಕೊಂಡಿದೆ. ಈ ಮೂಲಕ ಸಮಾಜದ ಅಂಕುಡೊಂಕುಗಳನ್ನು, ಆಡಳಿತದ ಲೋಪದೋಶಗಳನ್ನು, ಮೂಲೆ ಮೂಲೆಗಳಲ್ಲಿನ ಸುದ್ದಿ ಸಮಾಚಾರಗಳನ್ನು ಕರಾರುವಕ್ಕಾಗಿ ಹಾಗೂ ಶೀಘ್ರಗತಿಯಲ್ಲಿ ಜನತೆಗೆ ತಲುಪಿಸುವ ಸುದ್ದಿ ಮಾಧ್ಯಮಗಳು ಇನ್ನೂ ಕೊಂಚ ಮುಂದುವರಿದು, ಮುತುವರ್ಜಿವಹಿಸಿ ಅಜ್ಞಾತವಾಗಿರುವ ಪ್ರತಿಭಾನ್ವಿತರನ್ನು ಗುರುತಿಸಿ, ಅವರಲ್ಲಿರುವ ವಿಶೇಷ ಸಾಮರ್ಥ್ಯವನ್ನೂ ಜನರಿಗೆ ತಲುಪುವಂತೆ ಮಾಡಿದಲ್ಲಿ ಇಂತಹ ಎಲೆ ಮರೆಯ ಕಾಯಿಗಳು ತಮ್ಮ ಅಜ್ಞಾತವಾಸದಿಂದ ಮುಕ್ತಿ ಕಾಣಬಹುದೇನೊ…
ಟಿ.ಜಿ.ಹೆಗಡೆ, ಮಾಜಿ ಕ್ರಿಕೆಟಿಗ, ಮಾಗೋಡು