ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಭಾರತ ಮಹಿಳಾ ತಂಡ ಭರ್ಜರಿ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಪೂಜಾ ವಸ್ತ್ರಾಕರ್ ದಾಳಿಗೆ ತತ್ತರಿಸಿತು. ಪರಿಣಾಮ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 219 ರನ್ಗಳಿಸಿ ಆಲೌಟ್ ಆಗಿತ್ತು. ಟೀಮ್ ಇಂಡಿಯಾ ಪರ ಕರಾರುವಾಕ್ ದಾಳಿ ಸಂಘಟಿಸಿದ ಪೂಜಾ 53 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು.
ಇದಾದ ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 90 ರನ್ ಪೇರಿಸಿದ ಬಳಿಕ ಶಫಾಲಿ ವರ್ಮಾ (40) ವಿಕೆಟ್ ಒಪ್ಪಿಸಿದರು. ಇನ್ನು 74 ರನ್ಗಳ ಕೊಡುಗೆ ನೀಡಿದ ಸ್ಮೃತಿ ಮಂಧಾನ ರನೌಟ್ಗೆ ಬಲಿಯಾದರು.
ಆ ಬಳಿಕ ಬ್ಯಾಟ್ ಬೀಸಿದ ರಿಚಾ ಘೋಷ್ (52) ಹಾಗೂ ಜೆಮಿಮಾ ರೊಡ್ರಿಗಾಸ್ (73) ಅರ್ಧಶತಕಗಳನ್ನು ಬಾರಿಸಿ ಮಿಂಚಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಹರ್ಮನ್‌ಪ್ರೀತ್ ಕೌರ್ (0) ಹಾಗೂ ಯಾಸ್ತಿಕಾ ಭಾಟಿಯಾ (1) ಬೇಗನೆ ಔಟಾಗಿ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಜೊತೆಗೂಡಿದ ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರಾಕರ್ ಅರ್ಧಶತಕದ ಜೊತೆಯಾಟದೊಂದಿಗೆ ಟೀಮ್ ಇಂಡಿಯಾಗೆ ಆಸರೆಯಾಗಿ ನಿಂತರು. ಅದರಲ್ಲೂ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪ್ತಿ ಶರ್ಮಾ 171 ಎಸೆತಗಳನ್ನು ಎದುರಿಸಿ 9 ಫೋರ್ಗಳೊಂದಿಗೆ 78 ರನ್ ಬಾರಿಸಿದರು.
ಮತ್ತೊಂದೆಡೆ 9ನೇ ಕ್ರಮಾಂಕದಲ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ಪೂಜಾ 126 ಎಸೆತಗಳನ್ನು ಎದುರಿಸಿ 47 ರನ್ ಕಲೆಹಾಕಿದರು. ಈ ಮೂಲಕ ಪೂಜಾ-ದೀಪ್ತಿ ಜೋಡಿ ತಂಡದ ಮೊತ್ತವನ್ನು 400ರ ಗಡಿದಾಟಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 406 ರನ್ಗಳಿಸಿ ಆಲೌಟ್ ಆಯಿತು.
ಈ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 187 ರನ್ಗಳ ಬೃಹತ್ ಮುನ್ನಡೆ ಸಾಧಿಸಿದೆ. ಸದ್ಯ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡವು 10 ಓವರ್ಗಳ ಮುಕ್ತಾಯದ ವೇಳೆ ಯಾವುದೇ ವಿಕೆಟ್ ನಷ್ಟವಿಲ್ಲದೆ 41 ರನ್ ಕಲೆಹಾಕಿದೆ.
ಭಾರತ ಪ್ಲೇಯಿಂಗ್ ಇಲೆವೆನ್: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಜೆಮಿಮಾ ರೊಡ್ರಿಗಸ್ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್) , ರಿಚಾ ಘೋಷ್ , ದೀಪ್ತಿ ಶರ್ಮಾ , ಸ್ನೇಹ ರಾಣಾ , ಪೂಜಾ ವಸ್ತ್ರಾಕರ್ , ರೇಣುಕಾ ಠಾಕೂರ್ ಸಿಂಗ್ , ರಾಜೇಶ್ವರಿ ಗಾಯಕ್ವಾಡ್.
ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್: ಬೆತ್ ಮೂನಿ , ಫೋಬೆ ಲಿಚ್‌ಫೀಲ್ಡ್ , ಎಲ್ಲಿಸ್ ಪೆರ್ರಿ , ತಹ್ಲಿಯಾ ಮೆಕ್‌ಗ್ರಾತ್ , ಅಲಿಸ್ಸಾ ಹೀಲಿ (ನಾಯಕಿ) , ಅನ್ನಾಬೆಲ್ ಸದರ್ಲ್ಯಾಂಡ್ , ಆಶ್ಲೀ ಗಾರ್ಡ್ನರ್ , ಜೆಸ್ ಜೊನಾಸೆನ್ , ಅಲಾನಾ ಕಿಂಗ್ , ಕಿಮ್ ಗಾರ್ತ್ , ಲಾರೆನ್ ಚೀಟಲ್.