ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆ ಶತಕೋಟಿ ಟನ್ ದಾಟಲಿದೆ: ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ

ನವದೆಹಲಿ, ಡಿಸೆಂಬರ್​ 21: ದೇಶೀಯ ಕಲ್ಲಿದ್ದಲು ಉತ್ಪಾದನೆಯು 2025 ರ ವೇಳೆಗೆ ಗಣನೀಯವಾಗಿ ಹೆಚ್ಚಿರುವುದರಿಂದ ವಿದ್ಯುತ್ ವಲಯ ಬಳಕೆಗಾಗಿ ಕಲ್ಲಿದ್ದಲು ಆಮದು ಶೇಕಡಾ 2 ಕ್ಕೆ ಇಳಿಯಲಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ  ಹೇಳಿದ್ದಾರೆ. ನಿನ್ನೆ ದೆಹಲಿಯಲ್ಲಿ 9ನೇ ಸುತ್ತಿನ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿನ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಜೋಶಿ, ಕಲ್ಲಿದ್ದಲು ಉತ್ಪಾದನೆ ಮತ್ತು ಆಫ್ ಟೇಕ್‌ನಲ್ಲಿ ಸ್ವಾವಲಂಬನೆ ಸಾಧಿಸಲು ಕೋಲ್ ಇಂಡಿಯಾ ಲಿಮಿಟೆಡ್ ಮತ್ತು ಅಂಗಸಂಸ್ಥೆ ಕಂಪನಿಗಳ ದಾಖಲೆಯ ಸಾಧನೆಗಾಗಿ ಅಭಿನಂದಿಸಿದರು. ಈ ವರ್ಷ ಒಟ್ಟಾರೆ ಕಲ್ಲಿದ್ದಲು ಉತ್ಪಾದನೆಯು ಒಂದು ಬಿಲಿಯನ್ ಟನ್ ದಾಟುವ ಸಾಧ್ಯತೆಯಿದೆ ಎಂದು ಸಚಿವರು ಹೇಳಿದರು. ಭಾರತದ ಕಲ್ಲಿದ್ದಲು ವಲಯವು ರಾಷ್ಟ್ರದ ಇಂಧನ ಭದ್ರತೆಗೆ ನಿರಂತರವಾಗಿ ಕೊಡುಗೆ ನೀಡುತ್ತಿದೆ ಮತ್ತು ಆ ಮೂಲಕ ವೇಗವಾಗಿ ಬೆಳೆಯುತ್ತಿರುವ ನಮ್ಮ ಆರ್ಥಿಕತೆಗೆ ಮತ್ತಷ್ಟು ಶಕ್ತಿ ತುಂಬುತ್ತದೆ ಎಂದು ಸಚಿವರು ಹೇಳಿದರು.

ಭಾರತ ಅನುಸರಿಸುತ್ತಿರುವ ಸುಸ್ಥಿರ ಕಲ್ಲಿದ್ದಲು ಗಣಿಗಾರಿಕೆ ಪದ್ಧತಿಗಳ ಬಗ್ಗೆ ಒ ತ್ತಿ ಹೇಳಿದ ಶ್ರೀ ಜೋಶಿ, ಹೊರಸೂಸುವಿಕೆಯನ್ನು ನಿಯಂತ್ರಿಸುವಲ್ಲಿ ದೇಶವು ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ ಎಂದು ಸಂತಸಪಟ್ಟರು. ಕಲ್ಲಿದ್ದಲು ಅನಿಲೀಕರಣಕ್ಕೆ 6000 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗಿದೆ. ಸುಸ್ಥಿರ ಗಣಿಗಾರಿಕೆಯನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ, ಕಲ್ಲಿದ್ದಲು ಸಾರ್ವಜನಿಕ ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ 100 ಮಿಲಿಯನ್ ಸಸಿಗಳನ್ನು ನೆಟ್ಟಿವೆ ಎಂದು ಸಚಿವರು ಹೇಳಿದರು.

9ನೇ ಸುತ್ತಿನಲ್ಲಿ 26 ಮತ್ತು 7ನೇ ಸುತ್ತಿನ 2ನೇ ಪ್ರಯತ್ನದಲ್ಲಿ 5 ಸೇರಿದಂತೆ ಒಟ್ಟು 31 ಕಲ್ಲಿದ್ದಲು ಗಣಿಗಳನ್ನು 9ನೇ ಸುತ್ತಿನ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿನಲ್ಲಿ ನೀಡಲಾಗುತ್ತದೆ. ಹರಾಜಾಗುತ್ತಿರುವ ಗಣಿಗಳು ಕಲ್ಲಿದ್ದಲು/ಲಿಗ್ನೈಟ್ ಹೊಂದಿರುವ ಜಾರ್ಖಂಡ್, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹರಡಿಕೊಂಡಿವೆ.

ಭಾರತವು ಒಟ್ಟು 344.02 ಶತಕೋಟಿ ಟನ್‌ಗಳಷ್ಟು ಕಲ್ಲಿದ್ದಲು ನಿಕ್ಷೇಪವನ್ನು ಹೊಂದಿದೆ ಮತ್ತು ವಿಶ್ವದಲ್ಲೇ ಎರಡನೇ ಅತಿದೊಡ್ಡ ಕಲ್ಲಿದ್ದಲು ಉತ್ಪಾದಕ ದೇಶವಾಗಿದೆ. ಭಾರತವು ಇತ್ತೀಚಿನ ವರ್ಷಗಳಲ್ಲಿ ವಿದ್ಯುತ್ ಬೇಡಿಕೆಯಲ್ಲಿ ಸ್ಥಿರವಾದ ಹೆಚ್ಚಳವನ್ನು ಕಂಡಿದೆ. ಭಾರತದಲ್ಲಿ 72 % ರಷ್ಟು ವಿದ್ಯುತ್ ಅನ್ನು ಕಲ್ಲಿದ್ದಲಿನಿಂದ ಉತ್ಪಾದಿಸಲಾಗುತ್ತದೆ, ಇದು ರಾಷ್ಟ್ರದ ಅಭಿವೃದ್ಧಿಗೆ ಬಹಳ ಆಯಕಟ್ಟಿನ ಕ್ಷೇತ್ರವಾಗಿದೆ.

ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯು ದೇಶಕ್ಕೆ ಹೊಸ ಹೂಡಿಕೆಗಳನ್ನು ತರುತ್ತದೆ ಮತ್ತು ನೇರ ಮತ್ತು ಪರೋಕ್ಷವಾಗಿ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಹರಾಜಿನಿಂದ ಬರುವ ಸಂಪೂರ್ಣ ಆದಾಯವನ್ನು ಕಲ್ಲಿದ್ದಲು ಹೊಂದಿರುವ ರಾಜ್ಯ ಸರ್ಕಾರಗಳಿಗೆ ಹಂಚಲಾಗುತ್ತದೆ. ಕಲ್ಲಿದ್ದಲು ಹೊಂದಿರುವ ರಾಜ್ಯಗಳಾದ ಜಾರ್ಖಂಡ್, ಛತ್ತೀಸ್‌ಗಢ, ಒಡಿಶಾ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳಿಗೆ ಸಾಮಾಜಿಕ-ಆರ್ಥಿಕ ಪ್ರಯೋಜನಗಳನ್ನು ತರುತ್ತದೆ.