ಡಿಸೆಂಬರ್ 13ರ ಭದ್ರತಾ ಉಲ್ಲಂಘನೆಯ ನಂತರ ಸಂಸತ್ತಿನ ಭದ್ರತೆಗಾಗಿ ಸಿಐಎಸ್ಎಫ್ ನಿಯೋಜನೆ

ದೆಹಲಿ ಡಿಸೆಂಬರ್ 21: ಡಿಸೆಂಬರ್ 13 ರಂದು ಸಂಸತ್​​ನಲ್ಲಿ ನಡೆದ ಭದ್ರತಾ ವೈಫಲ್ಯ ನಂತರ ಹೊಸ ಸಂಸತ್ತಿನ ಕಟ್ಟಡ ಸಂಕೀರ್ಣದ “ಸಮಗ್ರ ಭದ್ರತೆ” ಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ವಹಿಸಿಕೊಳ್ಳಲಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಬುಧವಾರ ಹೊರಡಿಸಿದ ಅಧಿಸೂಚನೆಯಲ್ಲಿ, ದೆಹಲಿ ಪೊಲೀಸರ ಬದಲು ಸಿಐಎಸ್ಎಫ್ ಇಲ್ಲಿ ಭದ್ರತೆ ಒದಗಿಸಲಿದೆ. ಪ್ರವೇಶಿಸುವವರನ್ನು ಪರೀಕ್ಷಿಸುವುದು ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ಅದು ನಿರ್ವಹಿಸುತ್ತದೆಎಂದು ಗೃಹ ಸಚಿವಾಲಯ ತಿಳಿಸಿದೆ.

ಸಂಕೀರ್ಣದೊಳಗಿನ ಭದ್ರತೆಯು ಇವರ ಜವಾಬ್ದಾರಿಯಾಗಿ ಮುಂದುವರಿಯುತ್ತದೆ, ಆದರೆ ದೆಹಲಿ ಪೊಲೀಸರು ಹೊರಗಿನ ಪರಿಧಿಯ ರಕ್ಷಣೆಯನ್ನು ಮುಂದುವರಿಸುತ್ತಾರೆ. ಕಳೆದ ವಾರ ಭದ್ರತಾ ಉಲ್ಲಂಘನೆಯ ನಂತರ ಗೃಹ ಸಚಿವಾಲಯವು ಆದೇಶಿಸಿದ ವಿವರವಾದ ಭದ್ರತಾ ಸಮೀಕ್ಷೆಯ ನಂತರ ಈ ಬದಲಾವಣೆಯನ್ನು ಅನೇಕ ಏಜೆನ್ಸಿಗಳ ನಿಯಮಗಳ ಬದಲಿಗೆ ಭದ್ರತಾ ಪ್ರೋಟೋಕಾಲ್‌ಗಳನ್ನು ಸುಗಮಗೊಳಿಸುವ ಪ್ರಯತ್ನವಾಗಿ ನೋಡಲಾಗುತ್ತದೆ.

ಕೇಂದ್ರ ಗೃಹ ಸಚಿವಾಲಯವು ಸಂಸತ್ತಿನ ಕಟ್ಟಡ ಸಂಕೀರ್ಣದ ಸಮೀಕ್ಷೆಗೆ ಬುಧವಾರ ನಿರ್ದೇಶನ ನೀಡಿದ್ದು, “ಸಿಐಎಸ್‌ಎಫ್ ಭದ್ರತೆ ಮತ್ತು ಅಗ್ನಿಶಾಮಕ ವಿಭಾಗವನ್ನು ಸಮಗ್ರ ಮಾದರಿಯಲ್ಲಿ ನಿಯಮಿತ ನಿಯೋಜನೆ” ಮಾಡಬಹುದಾಗಿದೆ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

CISF ಒಂದು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯಾಗಿದ್ದು, ಇದು ಪ್ರಸ್ತುತ ಅನೇಕ ಕೇಂದ್ರ ಸರ್ಕಾರದ ಸಚಿವಾಲಯದ ಕಟ್ಟಡಗಳಿಗೆ ಭದ್ರತೆ ನೀಡುತ್ತಿದೆ.ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ಭದ್ರತೆ ನೀಡುವ ಸಿಐಎಸ್‌ಎಫ್‌ನ ಸರ್ಕಾರಿ ಕಟ್ಟಡ ಭದ್ರತಾ ಘಟಕದ ತಜ್ಞರು ಮತ್ತು ಪ್ರಸ್ತುತ ಸಂಸತ್ತಿನ ಭದ್ರತಾ ತಂಡದ ಅಧಿಕಾರಿಗಳೊಂದಿಗೆ ಅಗ್ನಿಶಾಮಕ ಮತ್ತು ಪ್ರತಿಕ್ರಿಯೆ ಅಧಿಕಾರಿಗಳು ಈ ವಾರದ ಕೊನೆಯಲ್ಲಿ ಸಮೀಕ್ಷೆಯನ್ನು ಕೈಗೊಳ್ಳಲಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ.

ಕೆಳಮನೆ ಅಧಿವೇಶನ ನಡೆಯುತ್ತಿರುವಾಗ ಇಬ್ಬರು ವ್ಯಕ್ತಿಗಳಾದ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಲೋಕಸಭೆಗೆ ಜಿಗಿದು ತಮ್ಮ ಬೂಟುಗಳೊಳಗೆ ಬಚ್ಚಿಟ್ಟ ಡಬ್ಬಿಗಳಿಂದ ಲೋಕಸಭೆಯೊಳಗೆ ಹಳದಿ ಹೊಗೆಯನ್ನು ಎರಚಿದರು. ಅವರನ್ನು ಆಗಲೇ ಸಂಸದರು ಹಿಡಿದಿದ್ದು, ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದರು. ಆದರೆ ಸಂದರ್ಶಕರ ಗ್ಯಾಲರಿಯಿಂದ ಅವರು ಒಳಗೆ ಜಿಗಿಯುವುದು ಹೇಗೆ, ಇದು ಭದ್ರತಾಲೋಪ ಎಂಬ ಪ್ರಶ್ನೆ ಹುಟ್ಟು ಹಾಕಿತ್ತು.

ಹೊಸ ಮತ್ತು ಹಳೆಯ ಸಂಸತ್ತಿನ ಸಂಕೀರ್ಣ ಮತ್ತು ಅದರ ಹತ್ತಿರದ ಕಟ್ಟಡಗಳನ್ನು ಸಿಐಎಸ್‌ಎಫ್‌ನ ಸಮಗ್ರ ಭದ್ರತೆಯ ಅಡಿಯಲ್ಲಿ ತರಲಾಗುವುದು, ಇದು ಸಂಸತ್ತಿನ ಭದ್ರತಾ ಸೇವೆ (ಪಿಎಸ್‌ಎಸ್), ದೆಹಲಿ ಪೊಲೀಸ್ ಮತ್ತು CRPF ನ ಪಾರ್ಲಿಮೆಂಟ್ ಡ್ಯೂಟಿ ಗ್ರೂಪ್ (ಪಿಡಿಜಿ) ಯ ಅಸ್ತಿತ್ವದಲ್ಲಿರುವ ಅಂಶಗಳನ್ನು ಸಹ ಹೊಂದಿರುತ್ತದೆ ಎಂದು ವರದಿ ಹೇಳಿದೆ.

2001 ರ ಸಂಸತ್ ದಾಳಿಯ ವಾರ್ಷಿಕೋತ್ಸವದಂದು ನಡೆದ ಭದ್ರತಾ ಉಲ್ಲಂಘನೆಯ ಘಟನೆಯು ಸಂಸತ್ತಿನ ಸಂಕೀರ್ಣದ ಭದ್ರತಾ ಲೋಪದೋಷಗಳನ್ನು ಬಹಿರಂಗಪಡಿಸಿತು. ಇಬ್ಬರು ಒಳನುಗ್ಗುವವರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಸಹಿ ಮಾಡಿದ ಪ್ರವೇಶ ಪಾಸ್‌ಗಳನ್ನು ಹೊಂದಿದ್ದರು. ಈ ವರ್ಷದ ಆರಂಭದಲ್ಲಿ, ಆರೋಪಿಗಳು ಹಳೆಯ ಸಂಸತ್ತಿನ ಕಟ್ಟಡವನ್ನು ಪರಿಶೀಲಿಸಿದರು ಮತ್ತು ಪ್ರವೇಶವನ್ನು ಅನುಮತಿಸುವ ಮೊದಲು ಶೂಗಳನ್ನು ಪರಿಶೀಲಿಸಲಾಗಿಲ್ಲ ಎಂದು ಕಂಡುಹಿಡಿದಿದ್ದು. ಹೊಸ ಕಟ್ಟಡದಲ್ಲಿಯೂ ಶೂಗಳನ್ನು ಪರಿಶೀಲಿಸದ ಕಾರಣ ಅವರು ಶೂಗಳಲ್ಲಿ ಹೊಗೆ ಬಾಂಬ್ ಬಚ್ಚಿಟ್ಟು ಅವರು ಒಳನುಗ್ಗಿದ್ದರು.