ಇಂದೋರ್​ನಲ್ಲಿ ಸಾಕು ನಾಯಿ ವಿಚಾರವಾಗಿ ಜಗಳ, ಕೋಪದಲ್ಲಿ ಗುಂಡಿಕ್ಕಿ ಇಬ್ಬರ ಹತ್ಯೆ, 6 ಮಂದಿಗೆ ಗಾಯ

ಸಾಕು ನಾಯಿ ವಿಚಾರವಾಗಿ ಆರಂಭವಾದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ. ಇಂದೋರ್​ನಲ್ಲಿ ಬ್ಯಾಂಕ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ರಾಜಪಾಲ್ ಸಿಂಗ್ ರಾಜಾವತ್ ನಿನ್ನೆ ರಾತ್ರಿ ತನ್ನ ಬಾಲ್ಕನಿಯಿಂದ ಅಕ್ಕ ಪಕ್ಕದ ಮನೆಯವರ ಮೇಲೆ ಗುಂಡು ಹಾರಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ. ರಾಜಾವತ್ ಮತ್ತು ಅವರ ಪಕ್ಕದ ಮನೆಯವರಾದ ವಿಮಲ್ ಅಚಲ (35) ಅವರು ರಾತ್ರಿ 11 ಗಂಟೆಗೆ ಕೃಷ್ಣಾ ಬಾಗ್ ಕಾಲೋನಿಯ ಕಿರಿದಾದ ಲೇನ್‌ನಲ್ಲಿ ತಮ್ಮ ನಾಯಿಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಎರಡೂ ನಾಯಿಗಳು ಎದುರುಬದರಾಗಿದ್ದವು. ನಂತರ ಗುರಾಯಿಸಿ ಕಿತ್ತಾಡಿಕೊಳ್ಳಲು ಶುರು ಮಾಡಿದ್ದವು.

ನಂತರ ಈ ಇಬ್ಬರ ನಡುವೆಯೂ ವಾಗ್ವಾದ ಶುರುವಾಗಿತ್ತು, ನಂತರ ರಾಜವತ್ ತನ್ನ ಮೊದಲ ಮಹಡಿಯ ಮನೆಗೆ ಓಡಿ 12-ಬೋರ್ ರೈಫಲ್ ಬಳಸಿ ಅಚಲ ಮೇಲೆ ಗುಂಡು ಹಾರಿಸಿದ್ದಾನೆ. ರಾಜಾವತ್ ಜನರ ಮೇಲೆ ಗುಂಡು ಹಾರಿಸುವ ಮೊದಲು ಗಾಳಿಯಲ್ಲಿ ಎರಡು ಮೂರು ಸುತ್ತು ಗುಂಡು ಹಾರಿಸಿದ್ದ. ಹಾಗೆಯೇ ಜನರೆಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.

ನಗರದ ನಿಪಾನಿಯಾ ಪ್ರದೇಶದಲ್ಲಿ ಹೇರ್ ಸಲೂನ್ ನಡೆಸುತ್ತಿದ್ದ ಅಚಲ, ಜತೆಗೆ ಮತ್ತೋರ್ವ ರಾಹುಲ್ ವರ್ಮಾ ಎಂಬುವವರು ಕೂಡ ಗುಂಡೇಟಿಗೆ ಬಲಿಯಾಗಿದ್ದಾರೆ. ಇಬ್ಬರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹೊಡೆದಾಟ ನಡೆದಾಗ ಬೀದಿಯಲ್ಲಿದ್ದ ಇತರ ಆರು ಮಂದಿಗೂ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಾವತ್ ಅವರ ಪುತ್ರ ಸುಧೀರ್ ಮತ್ತು ಇನ್ನೊಬ್ಬ ಸಂಬಂಧಿ ಶುಭಂ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ಗ್ವಾಲಿಯರ್ ಮೂಲದ ರಾಜಾವತ್ ಅವರು ಪರವಾನಗಿ ಪಡೆದ 12-ಬೋರ್ ರೈಫಲ್ ಅನ್ನು ಹೊಂದಿದ್ದರಿಂದ ಇಂದೋರ್‌ನಲ್ಲಿ ಖಾಸಗಿ ಸಂಸ್ಥೆಯೊಂದು ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.