ವಿಜಯಪುರ, ಆಗಸ್ಟ್ 18: ತೆಲಂಗಾಣದಲ್ಲಿ ಹಿಂದುತ್ವದ ಮೇಲೆ ಚುನಾವಣೆ ಎದರಿಸುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಚುನಾವಣೆಗೆ ಬಿಜೆಪಿ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ರಾಜ್ಯದ ಎಂಟು ವಿಧಾನಸಭೆ ಕ್ಷೇತ್ರಗಳ ಜವಾಬ್ದಾರಿ ನನಗೆ ನೀಡಿದ್ದಾರೆ ಎಂದರು.
ನಾಳೆ ಹೈದ್ರಾಬಾದ್ನಲ್ಲಿ ಒಂದು ಟ್ರೈನಿಂಗ್ ಆಗುತ್ತದೆ ಎಂದು ಹೇಳಿದ ಯತ್ನಾಳ್, ತೆಲಂಗಾಣದಲ್ಲಿ ಹಿಂದುಗಳ ಪರಿಸ್ಥಿತಿ ದಯನೀಯವಿದೆ. ಅಲ್ಲಿ ಹೆಚ್ಚು ಕಡಿಮೆ ಎಲ್ಲಾ ಓವೈಸಿ ಸರ್ಕಾರ ಇದ್ದಂತೆ ಇದೆ. ಟಿಆರ್ಎಸ್ ಸರ್ಕಾರ ಎಂದರೆ ಶಾಡ್ಯೋ ಆಫ್ ದಿ ಓವೈಸಿ. ಮುಸ್ಲಿಂರ ಸರ್ಕಾರ ಇದ್ದಂತೆ ಇದೆ. ಈ ಸಲ ತೆಲಂಗಾಣ ಜನ ಬದಲಾವಣೆ ಬಯಸಿದ್ದಾರೆ. ಅಲ್ಲಿ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ, ಅಲ್ಲಿಗೆ ಇವತ್ತು ಹೊರಟಿದ್ದೇನೆ ಎಂದರು.
ಎಂ ಬಿ ಪಾಟೀಲರು ಬಹಳ ಗುಂಗಿನಲ್ಲಿ ಇರುವುದು ಬೇಡ: ಯತ್ನಾಳ್
ಯತ್ನಾಳ್ ಮಾತಾಡಿದ ವಿಡಿಯೋ ನನ್ನ ಬಳಿ ಇದ್ದು, ಬಿಡುಗಡೆ ಮಾಡುತ್ತೇನೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಯತ್ನಾಳ್, ಎಂಬಿ ಪಾಟೀಲ್ ಏನು ಮಾಡುತ್ತಾರೋ ಮಾಡಲಿ. ಯಾರಿಗೆ ಅರಿವು ಮರೆವು ಇದೆ, ಯಾರಿಗೆ ಅಧಿಕಾರ ಸಿಕ್ಕ ಮೇಲೆ ವರ್ತನೆ ಬದಲಾವಣೆ ಆಗಿದ್ದು ಗೊತ್ತಿದೆ ಎಂದರು
ಎಂಬಿ ಪಾಟೀಲ್ ಚುನಾವಣೆಯಲ್ಲಿ ಗೆದ್ದು ಮಂತ್ರಿ ಆದ ಮೇಲೆ ಅವರು ಆಕಾಶಕ್ಕೆ ಹೋಗಿದ್ದಾರೆ. ಐದು ವರ್ಷ ಎಂಬಿ ಪಾಟೀಲ್ ಇರುತ್ತಾರೆ ಎಂದು ತಿಳಿದುಕೊಂಡಿದ್ದಾರೆ. ಹಿಂದೆ ಕೂಡ ಹಾಗೆ ತಿಳಿದುಕೊಂಡಿದ್ದರು. 20 ಶಾಸಕರು ಬಂದರೆ ನಿಮ್ಮ ಸರ್ಕಾರ ಆಗುತ್ತೆ ಅಂತ ಈ ಹಿಂದೆ ನನಗೆ ಹೇಳಿದ್ದರು. 17 ಜನ ಶಾಸಕರು ಬಂದಿದ್ದರೋ ಇಲ್ವೋ ಎಂದು ಯತ್ನಾಳ್ ಪ್ರಶ್ನಿಸಿದರು.
ಎಂಬಿ ಪಾಟೀಲರು ಬಹಳ ಗುಂಗಿನಲ್ಲಿ ಇರುವುದು ಬೇಡ. ಮತ್ತೆ ಕಾಂಗ್ರೆಸ್ ಸರ್ಕಾರದ ಆಯಸ್ಸು ಬಹಳ ದಿನ ಇಲ್ಲಾ ಅಂತ ಎಂಬಿ ಪಾಟೀಲ್ಗೆ ಎಚ್ಚರಿಸಿದ ಯತ್ನಾಳ್, ಸಾಬರ ಲೀಡರ್ ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ಮಂತ್ರಿಗಳ ಮಧ್ಯೆ ಜಗಳವಿದೆ. ನಾನು ಅಲ್ಪಸಂಖ್ಯಾತ ಅನ್ನಲ್ಲ, ಡೈರೆಕ್ಟ್ ಸಾಬರ್ ಎನ್ನುತ್ತೇನೆ. ಅಲ್ಪಸಂಖ್ಯಾತರ ಅಂದರೆ ಜೈನರು, ಕ್ರೈಸ್ತರು, ಸಿಖ್ ಸಮುದಾಯದವರು. ಇವರ ಅವರಿಗೆ ಕಾಳಜಿಯಿಲ್ಲ. ಸಾಬರ್ ಬಗ್ಗೆ ಎಂಬಿ ಪಾಟೀಲ್ ಹಾಗೂ ಇನ್ನೊಬ್ಬ ಮಂತ್ರಿಗೆ (ಸಚಿವ ಶಿವಾನಂದ ಪಾಟೀಲ) ಪ್ರೀತಿ ಇದೆ ಎಂದರು.
ನಾನು ಸಾಬರ್ ಮೌಲ್ವಿ ಆಗಬೇಕು ಎಂದು ಇಬ್ಬರ ಮಂತ್ರಿಗಳಲ್ಲಿ ಪೈಪೋಟಿ ಇದೆ. ಸೂಫಿ ಸಂತ ಆಗಬೇಕು ಅಂತಿದ್ದಾರೆ ಇಬ್ಬರು ಮಂತ್ರಿಗಳು ಎಂದು ಯತ್ನಾಳ್ ಹೇಳಿದರು. ಈ ಹಿಂದೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಮಾಡಿದ ಭ್ರಷ್ಟಾಚಾರ ಆರೋಪಕ್ಕೆ ನಾನು ಈಗಲೂ ಬದ್ಧ. ನಾನು ಹೇಳಿಲ್ಲ ಎಂದು ಉಲ್ಟಾ ಹೊಡೆಯುವ ಜಾಯಮಾನ ನನ್ನದಲ್ಲ ಎಂದು ಅವರು ಹೇಳಿದರು.
ಗಂಗಾ ನದಿ ಸ್ವಚ್ಛ ಆದಂತೆ ಬಿಜೆಪಿಯೂ ಸ್ವಚ್ಛವಾಗಲಿ: ಯತ್ನಾಳ್
40 ಪರ್ಸೆಂಟ್ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ತಾಕತ್ತು ಇದ್ದರೆ ತನಿಖೆ ಮಾಡಿ. ಗಂಗಾ ನದಿ ಸ್ವಚ್ಛ ಆದಂತೆ ಒಮ್ಮೆ ಬಿಜೆಪಿ ಆಗಲಿ ಎಂದು ಹೇಳಿದ ಯತ್ನಾಳ್, ಬಿಜೆಪಿಯೊಳಗೆ ಅಂತವರಿದ್ದರೆ ಒಮ್ಮೆ ಫೈನಲ್ ಆಗಲಿ. ಮುಖ್ಯಮಂತ್ರಿ, ಡಿಸಿಎಂ, ಸಚಿವರು 40 ಪರ್ಸೆಂಟ್ ಬಗ್ಗೆ ಹೇಳುತ್ತಾರೆ. ನಿಮಗೆ ತಾಕತ್ತು ಇದ್ದರೆ ಮೂರು ತಿಂಗಳ ಒಳಗಾಗಿ ತನಿಖೆ ಮಾಡಿ ಮುಗಿಸಿ ಎಂದು ಸವಾಲು ಹಾಕಿದರು.
40 ಪರ್ಸೆಂಟ್ ಅಂತ ಹೇಳುತ್ತಲೇ ಕಾಂಗ್ರೆಸ್ನವರು ಲೂಟಿ ಮಾಡುತ್ತಿದ್ದಾರೆ. ವರ್ಗಾವಣೆಯಲ್ಲಿ ಹೇಗೆ ವ್ಯಾಪಾರ ನಡೆದಿದೆ ಎಲ್ಲರಿಗೂ ಗೊತ್ತಿದೆ. ಮಾಧ್ಯಮಗಳಲ್ಲಿ ಇದನ್ನು ನೋಡಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಕೆಎಸ್ಆರ್ಟಿಸಿ ಸಿಬ್ಬಂದಿ, ಶಿಕ್ಷಕರಿಗೆ ಇವತ್ತು ಸಂಬಳ ಇಲ್ಲ ಎಂದರು.
ವಲಸಿಗರ ಶಾಸಕರು ಮತ್ತೆ ಕಾಂಗ್ರೆಸ್ ಸೇರುತ್ತಾರೆಂಬ ವಿಚಾರವಾಗಿ ಮಾತನಾಡಿದ ಯತ್ನಾಳ್, ವಲಸಿಗರು ಮತ್ತೆ ಕಾಂಗ್ರೆಸ್ ಸೇರುತ್ತಾರೆಂಬುದು ಊಹಾಪೋಹ. ನಮ್ಮ ಪಕ್ಷದ ಶಾಸಕರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈಗಾಗಲೇ ಮುನಿರತ್ನ ಬಿಜೆಪಿ ಬಿಡುವುದಿಲ್ಲ ಎಂದು ಹೇಳಿದ್ದಾಗಿ ತಿಳಿಸಿದರು.
ರಾಹುಲ್, ಮಮತಾರಂತಹ ನಾಯಕತ್ವ ದೇಶಕ್ಕೆ ಬೇಕಾಗಿಲ್ಲ: ಯತ್ನಾಳ್
ಈಗ ಲೋಕಸಭಾ ಚುನಾವಣೆ ನಡೆದರೆ ಕರ್ನಾಟಕದಲ್ಲಿ 25 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ ಯತ್ನಾಳ್, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಅವರಂತಹ ನಾಯಕತ್ವ ದೇಶಕ್ಕೆ ಬೇಕಾಗಿಲ್ಲ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶಕ್ಕೆ ಬೇಕಾಗಿದೆ ಎಂದರು.
ನಮ್ಮ ದೇಶ ಆರ್ಥಿಕವಾಗಿ 5ನೇ ಸ್ಥಾನದಲ್ಲಿದ್ದೇವೆ. ಇದು ಮುಂದುವರೆಯಬೇಕಾದರೆ ಯಾವುದೇ ಕಾಲದಲ್ಲಿ ಜನ ನರೇಂದ್ರ ಮೋದಿಯವರನ್ನು ಕೈಬಿಡಲ್ಲ. ಏನೇ ಕುತಂತ್ರ ಮಾಡಿದರೂ ಬಿಜೆಪಿ ಶಾಸಕರು ಕಾಂಗ್ರೆಸ್ಸಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಎಸ್ಟಿ ಸೋಮಶೇಖರ್ ಓಡಾಟ ವಿಚಾರವಾಗಿ ಮಾತನಾಡಿದ ಯತ್ನಾಳ್, ಶಾಸಕರಿದ್ದಾರೆ, ಸಿಎಂ, ಡಿಸಿಎಂ ಹೋದಾಗ ನಾಲ್ಕು ಒಳ್ಳೆ ಮಾತು ಹೇಳಿದಾಗ ಅನುದಾನ ಸಿಗುತ್ತದೆ ಅಂತ ಹೇಳಿದರೆ ತಪ್ಪೇನಿದೆ? ಜೆಹೆಚ್ ಪಟೇಲರು ಮುಖ್ಯಮಂತ್ರಿ ಆಗಿದ್ದಾಘ ವಿಜಯಪುರಕ್ಕೆ ಬಂದಿದ್ದರು. ನಾನಾಗ ಶಾಸಕನಿದ್ದೆ. ಆಗ ಪಟೇಲರು ಮತ್ತೊಮ್ಮೆ ಸಿಎಂ ಆಗಬೇಕು ಅಂತ ಹೇಳಿದ್ದೆ. ರಾಜಕಾರಣ ಬೇರೆ, ಸರ್ಕಾರ ಬಂದಮೇಲೆ ನಾನೊಬ್ಬ ಶಾಸಕ. ಕೆಲಸದ ಮೇಲೆ ಕೆಲವೊಂದು ಸಂದರ್ಭದಲ್ಲಿ ಸಿಎಂ, ಸಚಿವರ ಬಳಿ ಹೋಗಬೇಕಾಗುತ್ತದೆ ಎಂದರು.
ಲಕ್ಷ್ಮಣ ಸವದಿಗೆ ಯತ್ನಾಳ್ ತಿರುಗೇಟು
ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಬಳಿ ಪೆನ್ಡ್ರೈವ್ ಇರುವ ವಿಚಾರವಾಗಿ ಮಾತನಾಡಿದ ಯತ್ನಾಳ್, ಪೆನ್ಡ್ರೈವ್ ಇದ್ದರೆ ಬಿಡುಗಡೆ ಮಾಡಲಿ, ಬ್ಲ್ಯಾಕ್ಮೇಲ್ ಮಾಡೋದಲ್ಲ. ಯಾರದ್ದು ಪೆನ್ ಯಾರದ್ದು ಡೈವ್ ಇದೆಯೋ ಬಿಡುಗಡೆ ಮಾಡಲಿ. ಭಯಪಡಿಸಿ ಬಾಯಿ ಬಂದ್ ಮಾಡಿಸಲು ಹೀಗೆಲ್ಲ ಮಾಡಬೇಡಿ ಎಂದರು.