ಪುತ್ರನಿಗಾಗಿ ಕರ್ಮಭೂಮಿಯನ್ನೇ ತ್ಯಾಗ ಮಾಡಿದ ಬಿ ಎಸ್ ವೈ.!

ಶಿವಮೊಗ್ಗ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಪುತ್ರ ವಿಜಯೇಂದ್ರ ಸ್ಪರ್ದೆ ಮಾಡುತ್ತಾರೆ ಎಂದು ಯಡಿಯೂರಪ್ಪ ಹೇಳಿದರು. ಈ ಕುರಿತು ಮಹತ್ವದ ಘೋಷಣೆ ಮಾಡಿದ ಬಿಎಸ್‌ವೈ ಪುತ್ರನಿಗಾಗಿ ತಮ್ಮ ಸ್ವ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ.

ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಯಡಿಯೂರಪ್ಪ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ
ಪುತ್ರ ವಿಜಯೇಂದ್ರ ತಾಲೂಕಿನಲ್ಲಿಯೇ ಹೋರಾಟ ಮಾಡಬೇಕೆಂಬ ಅಪೇಕ್ಷೆ ನನಗೆ ಇದೆ. ಅವನಿಗೂ ನಿಮ್ಮ ಆಶೀರ್ವಾದ ಇರಬೇಕು ಎಂದು ನಿಮ್ಮಲ್ಲಿ ಕೈಜೋಡಿಸಿ ಪ್ರಾರ್ಥನೆ ಮಾಡುತ್ತೇನೆ ಎಂದು ಮನವಿ ಮಾಡಿದರು. ಕ್ಷೇತ್ರದ ಜನತೆ ನನಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಬಿ.ವೈ. ವಿಜಯೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ವಿನಂತಿಸಿದ್ರು.

ಮಾಜಿ ಸಿಎಂ ಬಿಎಸ್‌ವೈ ಈ ವಿಚಾರವನ್ನ ಸ್ಪಷ್ಟಪಡಿಸಿದ ನಂತರ ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗಿದೆ. ಯಡಿಯೂರಪ್ಪ ಅವರ ಈ ನಡೆ ಆಶ್ಚರ್ಯಕ್ಕೂ ಕಾರಣವಾಗಿದೆ. ಯಡಿಯೂರಪ್ಪ ಅವರ ಮುಂದಿನ ನಡೆ ಏನು.? ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.