ಶಿರಸಿ: ಭಾರತ ಪ್ರಪಂಚದಲ್ಲಿಯೇ ಶ್ರೇಷ್ಠ ರಾಷ್ಟ್ರವಾಗಲಿದೆ. ಮುಂದಿನ 25 ವರ್ಷಗಳು ಭಾರತದ ಪಾಲಿಗೆ ಮಹತ್ವವಾಗಿದ್ದು, ಸವಾಲಾಗಿ ಸ್ವೀಕರಿಸಬೇಕಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸ್ವಾತಂತ್ರ‍್ಯದ ಸುವರ್ಣ ಮಹೋತ್ಸವದ ಅಂಗವಾಗಿ ನಡೆಯಲಿರುವ ಹರ್ ಘರ್ ತಿರಂಗಾ ಅಭಿಯಾನದ ಜಾಗೃತಿ ಜಾಥಾಕ್ಕೆ ನಗರಸಭೆ ಆವರಣದಲ್ಲಿ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ದೇಶ ಇದುವರೆಗೆ ಹಲವು ಸವಾಲುಗಳನ್ನು ಎದುರಿಸಿದೆ. ದೇಶದ ಮೇಲೆ ಬ್ರಿಟೀಷರಿಂದ ಮಾತ್ರವಲ್ಲ ಅಲೆಕ್ಸಾಂಡರ್, ಮೊಘಲರ ಕಾಲದಿಂದಲೂ ನಿರಂತರ ದಾಳಿ ನಡೆದಿದೆ. ಎಲ್ಲವನ್ನು ದಾಟಿ, ನಮ್ಮ ಹಿರಿಯರು ಸ್ವತಂತ್ರ ದೇಶದ ಹೋರಾಟ ನಡೆಸಿದ್ದರ ಪರಿಣಾಮ ಸ್ವಾತಂತ್ರ‍್ಯದ ಸವಿಯನ್ನು ನಾವು ಕಂಡಿದ್ದೇವೆ. ಈ ಅಭಿಯಾನದ ಮೂಲಕ ಮತ್ತೆ ರಾಷ್ಟ್ರಪ್ರೇಮ ಮೂಡಿಸೋಣ ಎಂದು ಹೇಳಿದರು.
ಕಳೆದ 75 ವರ್ಷಗಳಲ್ಲಿ ದೇಶದ ಸಾಧನೆ ಹೆಮ್ಮೆ ಮೂಡಿಸುವಂತಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಭಾರತ ಗಮನಾರ್ಹ ಹೆಜ್ಜೆ ಇಡುತ್ತಿದೆ. ದೇಶ ಮೊದಲು ಎಂಬ ಭಾವ ನಮ್ಮಲ್ಲಿ ಜಾಗೃತವಾಗಬೇಕು. ಹಲವು ಶಕ್ತಿಗಳು ನಮ್ಮ ಮಧ್ಯೆ ಬಿರುಕು ಮೂಡಿಸಿ ದೇಶ ವಿಭಜಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಡತನ ಸಮಸ್ಯೆ ಇದ್ದರೂ ಮೆಟ್ಟಿ ನಿಲ್ಲುವ ಸಾಮರ್ಥ್ಯ ನಮಗಿದೆ. ಎಲ್ಲ ಒಗ್ಗೂಡಿ ಮುನ್ನಡೆಯಬೇಕಾಗಿದೆ ಎಂದರು.
ಸಹಾಯಕ ಆಯುಕ್ತ ಆರ್. ದೇವರಾಜ, ತಹಸೀಲ್ದಾರ ಶ್ರೀಧರ ಮುಂದಲಮನಿ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪೌರಾಯುಕ್ತ ಕೇಶವ ಚೌಗುಲೆ, ಶಾಲಾ ವಿದ್ಯಾರ್ಥಿಗಳು ಹಾಗೂ ಇತರರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.