ಭಟ್ಕಳ: ಮಳೆಯಿಂದ ಹಾನಿಯಾದ ತಾಲೂಕಿನ ಪುರಸಭೆ ವ್ಯಾಪ್ತಿಯ ಮಣ್ಕುಳಿ ಭಾಗಕ್ಕೆ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೋಮವಾರ ಸುರಿದ ರಕ್ಕಸ ಮಳೆಗೆ ಭಟ್ಕಳ ಅಕ್ಷರಶಃ ನಲುಗಿದ್ದು ಕೆಲ ಕಡೆಗಳಲ್ಲಿ ತಮ್ಮ ಸೂರು ಕಳೆದುಕೊಂಡು ನಿರಾಶಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಶಾಸಕ ಸುನೀಲ ನಾಯ್ಕ ಭಟ್ಕಳದ ನಾನಾಕಡೆಗಳಲ್ಲಿ ಹಗಲು ರಾತ್ರಿ ಎನ್ನದೆ ಭೇಟಿ ನೀಡಿ ತನ್ನ ಮತ ಕ್ಷೇತ್ರದ ಜನತೆ ಪರಿಹಾರದಿಂದ ವಂಚಿತರಾಗದಂತೆ ತಾವೇ ಖುದ್ದು ಮನೆಗಳಿಗೆ ಭೇಟಿ ನೀಡಿ ಪರಿಶೀಲಿನೆ ನಡೆಸುತ್ತಿದ್ದಾರೆ. ಜೊತೆಗೆ ಯಾವ ಯಾವ ಸ್ಥಳಗಳಲ್ಲಿ ಹಾನಿಯಾಗಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
ಅದೇ ರೀತಿ ಪುರಸಭೆ ವ್ಯಾಪ್ತಿಯ ಮಣ್ಕುಳಿಯ ಗ್ರಾಮದ ಬಹುತೇಕ ಎಲ್ಲಾ ಮನೆಗಳಿಗೂ ನೀರು ನುಗ್ಗಿದ್ದು ಇಂದು ಅಲ್ಲಿನ ಮನೆಗಳಿಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆಯನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸಿಸುವುದಾಗಿ ಭರವಸೆ ನೀಡಿದರು.
ಮಣ್ಕುಳಿಯ ದೀಪಕ ಮಾದೇವ ನಾಯ್ಕ, ಶನಿಯಾರ ಮಂಜಪ್ಪ ನಾಯ್ಕ, ಮಂಜುನಾಥ ಲಿಂಗ ನಾಯ್ಕ, ಹಾಗೂ ರಘುನಾಥ ರಸ್ತೆಯ ಲಕ್ಷ್ಮಿ ಪಾಂಡು ನಾಯ್ಕ, ಸೂಸಗಡಿ ಭಾಗದ ಪಾಂಡು ಶಾನಭಾಗ ಎನ್ನುವರ ಮನೆಗಳು ಭಾಗಶಃ ಹಾನಿಯಾಗಿ ಬಿರುಕು ಬಿಟ್ಟಿದ್ದು ಈ ಭಾಗಕ್ಕೂ ಕೂಡ ಶಾಸಕರು ಭೇಟಿ ನೀಡಿದ್ದರು. ಹಾಗೂ ರೈಲ್ವೆ ನಿಲ್ದಾಣ ಸಮೀಪವಿರುವ ನಾಗಮಾಸ್ತಿ ದೇವಸ್ಥಾನ ಕೂಡ ಸಂಪೂರ್ಣ ಹಾನಿಯಾಗಿದ್ದು ದೇವಸ್ಥಾನಕ್ಕೆ ಹೋಗುವ ಬ್ರಿಡ್ಜ್ ಶಿಥಿಲಾವಸ್ಥೆಯಲ್ಲಿದ್ದು ಹೊಸದಾಗಿ ಬ್ರಿಡ್ಜ್ ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿದರು
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈಗಾಗಲೇ ತಾಲೂಕಿನ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದು ನಿನ್ನೆ ಚೌಥನಿ, ಮುಂಡಳ್ಳಿ, ಶಿರಾಲಿ, ಪಡುಶಿರಾಲಿ, ಬಂದರ ಹಾಗೂ ಅನೇಕ ಕಡೆಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಹಾಗೂ ಮನೆಗಳಿಗೆ ನೀರು ನುಗ್ಗಿದವರ ದಾಖಲಾತಿ ನೀಡುವಂತೆ ತಿಳಿಸಿದ್ದೇನೆ ಹಾಗೂ ಆಯಾ ಸ್ಥಳಗಲ್ಲಿ ರಸ್ತೆ ಹಾಳಾದ ಕಡೆಗಳ್ಳಿ ಜೆಸಿಬಿ ಕಳುಹಿಸಿ ರಸ್ತೆಯನ್ನು ಸಮತ್ತಟ್ಟು ಮಾಡಲು ಅಧಿಕಾರಿಗಳನ್ನು ಕಡೆದುಕೊಂಡು ಹೋಗಿ ಸರಿ ಮಾಡಿಸುತ್ತಿದ್ದೇನೆ ಎಂದರು.
ಇನ್ನು ಯಾರ ಮನೆಗಳಿಗೆ ನೀರು ನುಗ್ಗಿದೆಯೋ ಅಂತವರು ತಮ್ಮ ದಾಖಲಾತಿಯನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ನೀಡುವಂತೆ ಮನವಿ ಮಾಡಿದರು. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಸುರೇಶ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು